ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಕರ್ನಾಟಕದ ಯುವಕ

Update: 2018-06-04 16:11 GMT

 ಹೊಸದಿಲ್ಲಿ, ಜೂ. 4: ಪರೀಕ್ಷೆ ಹಾಲ್‌ಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 28 ಹರೆಯದ ಯುಪಿಎಸ್‌ಸಿ ಆಕಾಂಕ್ಷಿ ಯುವಕ ರವಿವಾರ ದಿಲ್ಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಡವಾಗಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕದ ವರುಣ್‌ನನ್ನು ಉತ್ತರ ದಿಲ್ಲಿಯ ಪಹಾರ್‌ಗಂಜ್ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ಮನನೊಂದ ವರುಣ್ ರಾಜೇಂದ್ರ ನಗರದಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ನಿಯಮ ಇರುವುದು ಉತ್ತಮ. ಆದರೆ, ಕೆಲವು ರಿಯಾಯಿತಿ ನೀಡಬೇಕು’’ ಎಂದು ಬರೆದ ವರುಣ್‌ರ ಸೂಸೈಡ್ ನೋಟ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸೂಸೈಡ್ ನೋಟ್‌ನಲ್ಲಿ ವರುಣ್ ತನ್ನ ಕುಟುಂಬದ ಕ್ಷಮೆ ಯಾಚಿಸಿದ್ದಾರೆ ಹಾಗೂ ತನ್ನನ್ನು ಮರೆತು ಬಿಡುವಂತೆ ಮನವಿ ಮಾಡಿದ್ದಾರೆ. ವರುಣ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮೊದಲು ನೋಡಿರುವುದು ಅವರ ಗೆಳತಿ. ಅವರು ಕೂಡ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದರು.

 ‘‘ನಾನು ಕರೆ ಮಾಡುತ್ತಿದ್ದೆ. ಆದರೆ, ಅವರು ಇಡೀ ದಿನ ಕರೆ ಸ್ವೀಕರಿಸಲಿಲ್ಲ. ಆದುದರಿಂದ ಪರಿಶೀಲಿಸಲು ನಾನು ಅವರ ಬಾಡಿಗೆ ಕೊಠಡಿಗೆ ತೆರಳಿದ್ದೆ. ಆದರೆ, ವರುಣ್ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಕಿಟಕಿಯಿಂದ ನೋಡಿದೆ. ವರುಣ್‌ನ ಮೃತದೇಹ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ವರುಣ್ ಗೆಳತಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ವರುಣ್ ದೀರ್ಘಾವಧಿಯಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ವರುಣ್ ಮೃತದೇಹವನ್ನು ದಿಲ್ಲಿಯಲ್ಲೇ ವಾಸಿಸುತ್ತಿರುವ ಅವರ ಸಹೋದರಿಗೆ ಬಿಟ್ಟು ಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News