ಕರ್ನಾಟಕದಲ್ಲಿ 'ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡಿ: ಹೈಕೋರ್ಟ್‌ಗೆ ಧನುಷ್, ಐಶ್ವರ್ಯ ಅರ್ಜಿ

Update: 2018-06-04 16:19 GMT

ಬೆಂಗಳೂರು, ಜೂ.4: ತಮಿಳು ನಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡದಿರುವ ವಿವಾದವು ಹೈಕೋರ್ಟ್ ಮೆಟ್ಟಿಲೇರಿದೆ.

'ಕಾಲಾ' ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟು ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಸಂಸ್ಥೆಯಾದ ವಂಡರ್‌ಬರ್ ಫಿಲಂ ಪ್ರೈವೇಟ್‌ಲಿಮಿಟೆಡ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ, ಅಳಿಯ ಧನುಷ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ನೀಡಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದೆ.

ಅರ್ಜಿಯಲ್ಲಿ ರಾಜ್ಯ ಸರಕಾರ, ಗೃಹ ಇಲಾಖೆ, ಡಿಜಿ-ಐಜಿ, ಬೆಂಗಳೂರು ಪೊಲೀಸ್ ಆಯುಕ್ತರು, ಸೆಂಟ್ರಲ್ ಬೋರ್ಡ್ ಆ್ ಫಿಲ್ಮ್ ಸರ್ಟಿಫಿಕೇಟ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಅರ್ಜಿದಾರರ ಪರ ವಕೀಲರು ಸೋಮವಾರ ನ್ಯಾ.ಜಿ.ನರೇಂದರ್ ಅವರಿದ್ದ ನ್ಯಾಯಪೀಠದ ಮುಂದೆ ಹಾಜರಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಸ್ವೀಕರಿಸಬೇಕು ಎಂದು ಕೋರಿದರು. ಇದರಿಂದ ಮಂಗಳವಾರ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಕೋರ್ಟ್ ಅಧಿಕಾರಿಗೆ ನ್ಯಾಯಮೂರ್ತಿಗಳು ಸೂಚಿಸಿದರು.

ಕರ್ನಾಟಕದಿಂದ 15ರಿಂದ 20 ಕೋಟಿ ರೂ.ವರೆಗೆ ಆದಾಯ ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಚಿತ್ರವನ್ನು ಕರ್ನಾಟಕ ಸೇರಿ ಪ್ರಪಂಚದಾದ್ಯಂತ ಜೂನ್ 7ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವನ್ನು ಕರ್ನಾಟಕ ಸರಕಾರ ಪಾಲಿಸಬೇಕು ಎಂದು 'ಕಾಲಾ' ಚಿತ್ರದ ನಾಯಕ ರಜನಿಕಾಂತ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.

ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಮೇ 28ರಂದು ಪತ್ರಿಕಾ ಹೇಳಿಕೆ ನೀಡಿ ಬಿಡುಗಡೆಗೆ ಅಥವಾ ವಿತರಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದ್ದು, ಈ ಕ್ರಮ ನ್ಯಾಯಸಮ್ಮತವಾಗಿಲ್ಲ ಹಾಗೂ ನಮ್ಮ ಸಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News