ನಿಲ್ಲದ ತಂಬಾಕು ಸೇವನೆ

Update: 2018-06-04 18:32 GMT

ಮಾನ್ಯರೇ,

ಸರಕಾರಗಳು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಂತಹ ಉದ್ದೇಶದಿಂದ ಪ್ರತಿಯೊಂದು ಜಿಲ್ಲೆಯಲ್ಲಿ ತಂಬಾಕು ಸೇವನೆ ಬಳಕೆ ಮಾಡುವ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಅದು ಚಲಾವಣೆಗೆ ಬಾರದೆ ಜನತೆ ತಂಬಾಕು ಸೇವನೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವುದು ಬೇಸರದ ಸಂಗತಿ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ತಂಬಾಕು ಬಳಕೆಮಾಡುವವರ ಪ್ರಮಾಣ ಹೆಚ್ಚಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ಗುಟ್ಕಾ, ಪಾನ್ ಮಸಾಲ ಇತ್ಯಾದಿಗಳನ್ನು ಬಳಕೆ ಮಾಡುತ್ತಿದ್ದು, ಈ ಸಂಖ್ಯೆ ಪ್ರತೀವರ್ಷ ಏರಿಕೆಯಾಗುತ್ತಿದೆ. ಇಂತಹ ಆತಂಕಕಾರಿ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ತಜ್ಞರು, ಮಾಧ್ಯಮಗಳು ಹರಸಾಹಸ ಪಡುತ್ತಿವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲ ಬಳಸುವವರ ಸಂಖ್ಯೆ ಅಧಿಕವಾಗಿದೆ. ಕೊಟ್ಟಾ ಕಾಯ್ದೆಯ ಅನ್ವಯ ಹೊಟೇಲ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧ, ಆಸ್ಪತ್ರೆಯ ಆವರಣ ಹಾಗೂ ಶಾಲೆ ಆವರಣಗಳಿಂದ 100 ಮೀಟರ್ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡಕೂಡದು ಮತ್ತು ತಂಬಾಕು ಉತ್ಪನ್ನ ಮಾರಾಟ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ.

ಅಲ್ಲದೆ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣ, ಉದ್ಯಾನವನ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿದ್ದರೂ ಧೂಮಪಾನ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದರೂ ತಂಬಾಕು ಬಳಸುವಂತಹ ವ್ಯಕ್ತಿಗಳು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದಲ್ಲದೇ ಸಾಮಾನ್ಯ ಜನರ ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆ. ಸಾರ್ವಜನಿಕರಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಮೂಡದಿದ್ದರೆ, ಸರಕಾರದ ಜಾಗೃತಿ ಕಾರ್ಯಕ್ರಮಗಳಿಗೆ ಬೆಲೆಯೇ ಬಾರದು.

Similar News