ಎಸ್‌ಸಿ/ಎಸ್ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿಗೆ ಸುಪ್ರೀಂ ಅಸ್ತು

Update: 2018-06-05 14:17 GMT

ಹೊಸದಿಲ್ಲಿ,ಜೂ.5: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನೌಕರರಿಗೆ ‘ಕಾನೂನಿಗೆ ಅನುಗುಣವಾಗಿ’ ಭಡ್ತಿಯಲ್ಲಿ ಮೀಸಲಾತಿಯನ್ನು ನೀಡಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹಸಿರು ನಿಶಾನೆ ತೋರಿಸಿದೆ.

 ವಿವಿಧ ಉಚ್ಚ ನ್ಯಾಯಾಲಯಗಳ ಆದೇಶಗಳಿಂದಾಗಿ ಇಡೀ ಭಡ್ತಿ ಪ್ರಕ್ರಿಯೆಯು ಸ್ಥಗಿತಗೊಂಡಿದೆ ಮತ್ತು ಸರ್ವೋಚ್ಚ ನ್ಯಾಯಾಲಯವು ಕೂಡ 2015ರಲ್ಲಿ ಇಂತಹುದೇ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಯ್ದಕೊಳ್ಳುವಂತೆ ಆದೇಶ ನೀಡಿತ್ತು ಎಂಬ ಕೇಂದ್ರದ ನಿವೇದನೆಯನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು, ನೀವು(ಕೇಂದ್ರ) ಕಾನೂನಿಗನುಗುಣವಾಗಿ ಭಡ್ತಿಯನ್ನು ನೀಡಬಹುದು ಎಂದು ತಿಳಿಸಿತು.

 ಎಸ್‌ಸಿ/ಎಸ್ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕುರಿತಂತೆ ದಿಲ್ಲಿ,ಬಾಂಬೆ ಹಾಗೂ ಪಂಜಾಬ್ ಮತ್ತು ಹರ್ಯಾಣ ಉಚ್ಚನ್ಯಾಯಾಲಯಗಳು ಪ್ರತ್ಯೇಕ ತೀರ್ಪುಗಳನ್ನು ನೀಡಿವೆ ಮತ್ತು ಈ ತೀರ್ಪುಗಳ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳ ಕುರಿತು ಸರ್ವೋಚ್ಚ ನ್ಯಾಯಾಲಯವೂ ವಿವಿಧ ಆದೇಶಗಳನ್ನು ಹೊರಡಿಸಿದೆ ಎಂದು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಿಳಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ಅವರು,ಸರಕಾರಿ ಉದ್ಯೋಗಗಳಲ್ಲಿ ಭಡ್ತಿಯಲ್ಲಿ ಮೀಸಲಾತಿ ಕುರಿತು ಪ್ರಕರಣ ಕಾನೂನುಗಳನ್ನು ಉಲ್ಲೇಖಿಸಿದರಲ್ಲದೆ 2006ರಲ್ಲಿ ಎಂ.ನಾಗರಾಜ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪು ಅನ್ವಯವಾಗುತ್ತದೆ ಎಂದು ವಾದಿಸಿದರು. ಸರಕಾರಿ ಉದ್ಯೋಗಗಳಲ್ಲಿ ಭಡ್ತಿಗಳಿಗಾಗಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಕೆನೆಪದರ ಪರಿಕಲ್ಪನೆಯನ್ನು ಅನ್ವಯಿಸಲಾಗದು ಎಂದು ಎಂ.ನಾಗರಾಜ ಪ್ರಕರಣದ ತೀರ್ಪು ತಿಳಿಸಿತ್ತು.

ಭಡ್ತಿಗಳಲ್ಲಿ ಮೀಸಲಾತಿ ಕುರಿತಂತೆ ಮೇ 17ರಂದು ನ್ಯಾ.ಕುರಿಯನ್ ಜೋಸೆಫ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಹೊರಡಿಸಿದ್ದ ಆದೇಶವನ್ನು ಪ್ರಸ್ತಾಪಿಸಿದ ಸಿಂಗ್,ಇಂತಹುದೇ ಆದೇಶವನ್ನು ಹೊರಡಿಸುವಂತೆ ಕೋರಿಕೊಂಡರು. ತನ್ನೆದುರು ಅರ್ಜಿಯ ವಿಚಾರಣೆ ಬಾಕಿಯಿರುವುದು ಭಡ್ತಿ ಉದ್ದೇಶಕ್ಕಾಗಿ ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುವುದಿಲ್ಲ ಎಂದು ನ್ಯಾ.ಜೋಸೆಫ್ ನೇತೃತ್ವದ ಪೀಠವು ಹೇಳಿತ್ತು.

ಎಸ್‌ಸಿ/ಎಸ್‌ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು 1997,ಆಗಸ್ಟ್‌ನಲ್ಲಿ ಹೊರಡಿಸಿದ್ದ ಅಧಿಕೃತ ಸುತ್ತೋಲೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಕಳೆದ ವರ್ಷದ ಆ.23ರ ತನ್ನ ತೀರ್ಪಿನಲ್ಲಿ ತಳ್ಳಿಹಾಕಿತ್ತು. ಇದರ ವಿರುದ್ಧ ಕೇಂದ್ರವು ಮೇಲ್ಮನವಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News