ನೂತನ ಪಿಂಚಣಿ ಯೋಜನೆ ತಿದ್ಧುಪಡಿಗೆ ಕ್ರಮ ಕೈಗೊಳ್ಳಲು ಆಗ್ರಹ

Update: 2018-06-05 15:02 GMT

ಬೆಂಗಳೂರು, ಜೂ.5: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಪಿಂಚಣಿ ಯೋಜನೆಯಿಂದ ಸರಕಾರಿ ನೌಕರರಿಗೆ ಅನ್ಯಾಯವಾಗುತ್ತದೆ. ಆದುದರಿಂದಾಗಿ, ಈ ಯೋಜನೆಗೆ ಅಗತ್ಯ ತಿದ್ದುಪಡಿ ಮಾಡಬೇಕಾದ ಅಗತ್ಯವಿದ್ದು, ರಾಜ್ಯ ಸರಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ತಿನ ಸದಸ್ಯ ರಮೇಶ ಬಾಬು ಮುಖ್ಯಮಂತ್ರಿಗೆ ಪತ್ರ ಬರೆದು, ಆಗ್ರಹಿಸಿದ್ದಾರೆ.

ಹೊಸ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರರ ಸೇವಾ ಅವಧಿಯ ಒಂದು ಭಾಗವನ್ನು ಷೇರುಪೇಟೆ ಆಧಾರಿತ ಯೋಜನೆಗೆ ಒಳಪಡಿಸಿದ್ದು, ಇದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತದೆ ಹೊರತು ಸರಕಾರಿ ನೌಕರರಿಗೆ ಅಥವಾ ಅವರ ಕುಟುಂಬಕ್ಕಾಗಲಿ ಯಾವುದೇ ಲಾಭ ಮತ್ತು ಸಾಮಾಜಿಕ ಭದ್ರತೆ ನೀಡುವುದಿಲ್ಲ. ಈ ಯೋಜನೆಯು ಸರಕಾರಿ ನೌಕರರಲ್ಲಿ ಎರಡು ವರ್ಗಗಳನ್ನು ಸೃಷ್ಟಿ ಮಾಡುತ್ತದೆ. ಅಲ್ಲದೆ, ನೌಕರರು ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಉಳಿತಾಯ ಮಾಡಲು ಅವಕಾಶವಿರುವುದಿಲ್ಲ.

ಅಲ್ಲದೆ, ನೌಕರರ ಕುಟುಂಬದ ನಿವೃತ್ತಿ ವೇತನಕ್ಕಾಗಲಿ, ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿ ಭತ್ತೆ ಆಧಾರಿತ ಪಿಂಚಣಿ ಪಡೆಯಲು ಮತ್ತು ನಿವೃತ್ತಿ ಸಮಯದಲ್ಲಿ ಮೂಲ ವೇತನದ ಶೇ.50 ರಷ್ಟು ಪಿಂಚಣಿ ಪಡೆಯಲು, ಮರಣೋತ್ತರ ಸಂದರ್ಭದಲ್ಲಿ ಅವಲಂಭಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಲು ಹೊಸ ಯೋಜನೆಯಲ್ಲಿ ಅವಕಾಶವಿಲ್ಲ. ಆದುದರಿಂದಾಗಿ, ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಸರಕಾರಿ ಮತ್ತು ಅರೆ ಸರಕಾರಿ ನೌಕರರು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಹೊಸ ಯೋಜನೆಗೆ ತಿದ್ದುಪಡಿ ಮಾಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News