ಬಿಎಸ್ಪಿಯಲ್ಲಿ ಶೇ.50 ರಷ್ಟು ಯುವಸಮುದಾಯಕ್ಕೆ ಪ್ರಾತಿನಿಧ್ಯ: ಬಿಎಸ್ಪಿ ಕರ್ನಾಟಕ ಉಸ್ತುವಾರಿ ಡಾ.ಅಶೋಕ್ ಕುಮಾರ್

Update: 2018-06-05 15:48 GMT

ಬೆಂಗಳೂರು, ಜೂ.5: ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಎಲ್ಲ ಹಂತದ ಸಮಿತಿಗಳಲ್ಲಿ ಶೇ.50 ರಷ್ಟು ಯುವಜನರಿಗೆ ಪ್ರಾಧಾನ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಎಸ್ಪಿ ಕರ್ನಾಟಕ ಉಸ್ತುವಾರಿ ಡಾ.ಅಶೋಕ್ ಕುಮಾರ್ ಬೆಂದಾಲ್ ತಿಳಿಸಿದ್ದಾರೆ.

ಮಂಗಳವಾರ ನಗರದ ಸರ್ದಾರ್ ಪಟೇಲ್ ಭವನದಲ್ಲಿ ಆಯೋಜಿಸಿದ್ದ ಬಿಎಸ್ಪಿ ರಾಜ್ಯಾಧ್ಯಕ್ಷ ಹಾಗೂ ನೂತನವಾಗಿ ಆಯ್ಕೆಯಾಗಿರುವ ಶಾಸಕ ಎನ್.ಮಹೇಶ್‌ಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯುವ ಸಮುದಾಯವನ್ನು ಆಕರ್ಷಿಸುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಲು ಆಲೋಚಿಸಲಾಗಿದೆ ಎಂದರು.

ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಾವುದೇ ಪೋಸ್ಟ್‌ಗಾಗಿ ಕೆಲಸ ಮಾಡುವವರನ್ನು ಪಕ್ಷದಿಂದ ದೂರವಿಡಲಾಗುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಕೇಂದ್ರ ಸಮಿತಿ ಮಟ್ಟದಿಂದ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿವರೆಗೂ ಎಲ್ಲದರಲ್ಲೂ ಯುವಜನರಿಗೆ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸಲಾಗುತ್ತದೆ ಎಂದು ಪುನರುಚ್ಚರಿಸಿದರು.

ಯಾವ ಸ್ಥಳದಲ್ಲಿ ನಿರಂತರವಾದ ಸಂಘರ್ಷ ನಡೆಯುತ್ತದೆಯೋ ಅಲ್ಲಿ, ಬದಲಾವಣೆ ಸಾಧ್ಯ. ಅದರಂತೆ ದೇಶದ ಹಲವು ಕಡೆಗಳಲ್ಲಿ ನಿರಂತರವಾದ ಸಂಘರ್ಷದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಕಂಡಿದ್ದೇವೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಹಲವಾರು ತಿಕ್ಕಾಟಗಳ ಮೂಲಕ, ಸಾವಿರಾರು ಹೋರಾಟಗಳ ಮೂಲಕ ಸರಕಾರ ರಚನೆ ಮಾಡಲು ಸಾಧ್ಯವಾಗಿದ್ದು. ಅದೇ ರೀತಿ ಕರ್ನಾಟಕದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯವಾಯಿತು ಎಂದು ತಿಳಿಸಿದರು.

ಮಾಯಾವತಿ ಪ್ರಧಾನಿಯಾಗಬಹುದು?: ಮುಂದಿನ ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅಲ್ಲದೆ, ಪಾರ್ಲಿಮೆಂಟ್ ಚುನಾವಣೆಯೂ ನಡೆಯಲಿದ್ದು, ಬಿಎಸ್ಪಿ ಪಕ್ಷವು ಪ್ರಧಾನ ಪಾತ್ರ ವಹಿಸಲಿದೆ. ಜಾತ್ಯತೀತ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಲಿದ್ದು, ಮುಂದಿನ ದಿನಗಳಲ್ಲಿ ಮಾಯಾವತಿ ಅವರು ಪ್ರಧಾನಿಯಾದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಭವಿಷ್ಯ ನುಡಿದರು.

ಎಂ.ಗೋಪಿನಾಥ್ ಮಾತನಾಡಿ, ಕರ್ನಾಟಕದಲ್ಲಿ ಮಹೇಶ್ ಅವರ ಗೆಲುವು ಹಣ ಅಥವಾ ಹೆಂಡದ ಮೇಲೆ ಸಾಧನೆ ಮಾಡಿರುವುದಲ್ಲ. ಸತತವಾಗಿ 30 ವರ್ಷಗಳ ನಿರಂತರ ಪರಿಶ್ರಮ, ತ್ಯಾಗ, ಹೋರಾಟದಿಂದ ಗಳಿಸಿಕೊಂಡಿರುವುದು ಎಂದು ವಿಮರ್ಶಿಸಿದರು.

ಯಾವ ಚಳವಳಿಯಲ್ಲಿ ಹೊಸಬರು ಇದ್ದಾರೆಯೋ ಅಲ್ಲಿ ಚಳವಳಿ ಬಲಗೊಳ್ಳುತ್ತಿದೆ ಎಂದರ್ಥ. ಆದರೆ, ಎಲ್ಲಿ ಹಳೆ ಮುಖಗಳು ತುಂಬಿಕೊಂಡಿರುತ್ತದೆಯೋ ಅಲ್ಲಿ ಚಳವಳಿ ಸರ್ವನಾಶದತ್ತ ದಾಪುಗಾಲಿಡುತ್ತಿದೆ ಎಂದರ್ಥ. ಆದುದರಿಂದಾಗಿ, ಸತತವಾದ ಸಂಘರ್ಷ ನಡೆದಾಗ ಮಾತ್ರ ಚಳವಳಿಯನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಎನ್.ಮಹೇಶ್ ಹಾಗೂ ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News