2020 ರ ಜೂನ್ ತಿಂಗಳೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ: ಸ್ಪೀಕರ್ ಕೆ.ಆರ್ ರಮೇಶ್‍ ಕುಮಾರ್

Update: 2018-06-05 16:41 GMT

ಸಕಲೇಶಪುರ,ಜೂ.05: 2020 ರ ಜೂನ್ ತಿಂಗಳ ಒಳಗಾಗಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್ ರಮೇಶ್‍ ಕುಮಾರ್ ಹೇಳಿದರು.

ಮಂಗಳವಾರ ಎತ್ತಿನಹೊಳೆ ಯೋಜನೆ ಪ್ರದೇಶಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನಹೊಳೆ ಸಂಕೀರ್ಣವಾದ ಯೋಜನೆಯಾಗಿದ್ದು, ನಿಗಧಿತ ಅವಧಿಯಲ್ಲಿ ಕಾಮಗಾರಿ ಮುಗಿಸುವುದು ಅಸಾದ್ಯ. 2018 ರ ಮಾರ್ಚ್ ವೇಳೆ ನೀರು ಹರಿಸುವ ಭರವಸೆ ಇತ್ತಾದರೂ ನಿಗಧಿತ ವೇಗದಲ್ಲಿ ಕಾಮಗಾರಿ ನಡೆಸಲು ಭೌಗೋಳಿಕ ಸನ್ನಿವೇಶ ಸಹಕರಿಸದ ಕಾರಣ ಕಾಮಗಾರಿ ವಿಳಂಬವಾಗಿದೆ. 2020 ರ ಜೂನ್ ತಿಂಗಳ ವೇಳೆಗೆ ಬಹುತೇಕ ಕಾಮಗಾರಿ ಮುಕ್ತಾಯವಾಗವ ಭರವಸೆ ಇದೆ ಎಂದರು.

ಈಗಾಗಲೇ ಯೋಜನೆ ಒಂದನೇ ಹಂತವಾದ ಕುಂಬರಡಿ ಎಸ್ಟೇಟ್‍ನ ಚೆಕ್ ಡ್ಯಾಂ ಕಾಮಗಾರಿ ಶೇ 70 ರಷ್ಟು ಮುಕ್ತಾಯವಾಗಿದ್ದು, ಈ ಚೆಕ್ ಡ್ಯಾಂಗೆ ವಿವಿಧ ಕಿರು ಚೆಕ್ ಡ್ಯಾಂಗಳಿಂದ ಸಂಗ್ರಹಿಸಿದ ನೀರನ್ನು ತಂದು ಇಲ್ಲಿಂದ ದೊಡ್ಡನಾಗರದ ಮೂಲಕ 260 ಕಿ.ಮಿ ದೂರದ ಬಿಳಿಗುಡ್ಲ ಜಲಾಶಯಕ್ಕೆ ಹರಿಸುವ ಕಾಮಗಾರಿ ಚುರುಕಾಗಿ ನಡೆಯುತ್ತಿದೆ ಎಂದರು. 

ಭೂಸ್ವಾಧಿನ ಅಪೂರ್ಣ: ಯೋಜನೆಯಲ್ಲಿ ಭೂಮಿ ಕಳೆದು ಕೊಳ್ಳುವವರಿಗೆ ಪರಿಹಾರ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲು ಚುನಾವಣೆ ಅಡ್ಡಿಯಾಗಿದ್ದು ಮುಂದಿನ ಒಂದೆರಡು ತಿಂಗಳಿನಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದರು.

ಪ್ರತಿ ತಿಂಗಳು ಸಭೆ: ತಾಲೂಕಿನ ಸರ್ವಾಂಗಿಣ ಅಭಿವೃದ್ದಿಗಾಗಿ ಈಗಾಗಲೇ ಈ ಯೋಜನೆಯ ಮೂಲಕ 120 ಕೋಟಿ ಹಣ ನೀಡಲಾಗಿದೆ. ಆದರೆ, ಕೆಲವೆಡೆ ಮತ್ತಷ್ಟು ಅನುದಾನದ ಬೇಡಿಕೆ ಇರುವುದರಿಂದ ಈ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಯೋಜನೆಯ ಪ್ರಗತಿ ತಿಳಿಯಲು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಿದ್ದೆನೆ ಎಂದರು. 

ಹೂಳೆತ್ತಲು ಕ್ರಮ: ಎತ್ತಿನಹೊಳೆ ಕಾಮಗಾರಿಯಿಂದಾಗಿ ನದಿ ಸಮೀಪದ ಗುಡ್ಡಗಳು ಕುಸಿದು ನದಿ ಸಂಫೂರ್ಣ ಹೂಳು ತುಂಬಿರುವುದರಿಂದ ನದಿಯಲ್ಲಿದ್ದ ಜಲಚರಗಳು ಮಣ್ಣಿನಲ್ಲಿ ಹೂತು ಸಾವಿಗೀಡಾಗುತ್ತಿವೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಭಾಧ್ಯಕ್ಷರು, ಎತ್ತಿನಹೊಳೆ ಹರಿಯುವ ಐದು ಕಿ.ಮಿ ದೂರದವರಗೆ ನದಿ ಸ್ವಚ್ಚಗೊಳಿಸುವ ಮೂಲಕ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಈ ವೇಳೆ ಯೋಜನೆಯ ಮುಖ್ಯ ಅಭಿಯಂತರ ಚನ್ನಪ್ಪ ನಾಯಕ, ಹಿರಿಯ ಅಭಿಯಂತರ ವೇಣುಗೋಪಾಲ್,ಕಾರ್ಯಪಾಲಕ ಅಭಿಯಂತರ ಹರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗುರುಪ್ರಸಾದ್, ಶ್ರೀನಿವಾಸ್, ಶಶಿಧರ್, ಶ್ರೀನಿವಾಸ್ ಪುರ ತಾಲೂಕು ಜಿಪಂ ಸದಸ್ಯ ನಾರಯಣಸ್ವಾಮಿ, ಭೂ ಅಭಿವೃದ್ದಿ ಭ್ಯಾಂಕ್ ಅಧ್ಯಕ್ಷ ಅಶೋಕ್, ಮುಖಂಡರಾದ ರಮೇಶ್ ಕುಮಾರ್, ಪ್ರಸಾದ್, ಪ್ರಕಾಶ್, ಶ್ರೀನಿವಾಸ್ ರೆಡ್ಡಿ, ಕೃಷ್ಣರೆಡ್ಡಿ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News