ಉತ್ತರ ಪ್ರದೇಶದಲ್ಲಿ ಫುಡ್ ಪಾರ್ಕ್ ಯೋಜನೆ ಕೈಬಿಡುವುದಾಗಿ ಎಚ್ಚರಿಸಿದ ಪತಂಜಲಿ

Update: 2018-06-06 06:56 GMT

ಲಕ್ನೋ, ಜೂ.6: ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್ ವೇ ಪಕ್ಕದಲ್ಲಿ ನಿರ್ಮಿಸಬೇಕೆಂದಿದ್ದ ಬೃಹತ್ ಫುಡ್ ಪಾರ್ಕ್ ಯೋಜನೆಯನ್ನು ಕೈ ಬಿಡುವುದಾಗಿ ಎಚ್ಚರಿಸಿದೆ. ಈ ಸಂಬಂಧದ ಕಡತಗಳಿಗೆ ಅನುಮತಿ ನೀಡುವಲ್ಲಿ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರವು ಅನುಸರಿಸುತ್ತಿರುವ ವಿಳಂಬ ನೀತಿಯೇ ಇದಕ್ಕೆ ಕಾರಣವೆಂದು ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

‘‘ಈ ಯೋಜನೆಗೆ ನಮಗೆ ರಾಜ್ಯ ಸರಕಾರದ ಸಹಕಾರ ದೊರಕಿಲ್ಲ. ಅನುಮತಿಗಳಿಗಾಗಿ ಬಹಳಷ್ಟು ಸಮಯ ಕಾದಿದ್ದೇವೆ. ಈಗ ಅದನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ’’ ಎಂದು ಅವರು ಹೇಳಿದರು. ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಹಾಗೂ ಮುಖ್ಯಮಂತ್ರಿ ಜತೆ ನಡೆಸಿದ ಹಲವು ಸಭೆಗಳೂ ವಿಫಲವಾಗಿವೆ. ಈ ಘಟಕಕ್ಕೆ ಅಗತ್ಯವಾದ ಯಂತ್ರೋಪಕರಣಗಳಿಗೂ ಆರ್ಡರ್ ನೀಡಲಾಗಿದ್ದು, ಇಲ್ಲಿ ಘಟಕ ಸ್ಥಾಪನೆಯಾಗಿದ್ದರೆ ಸಾವಿರಾರು ಜನರಿಗೆ ಉದ್ಯೋಗ ಹಾಗೂ ಲಕ್ಷಾಂತರ ರೈತರ ಬದುಕು ಹಸನಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಆದರೆ ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯದ ಪ್ರಕಾರ ದಿಲ್ಲಿ ಸಮೀಪದ ಗೌತ್‌ಮ್ ಬುಧ್ ನಗರದಲ್ಲಿ ಈ ಫುಡ್ ಮತ್ತು ಹರ್ಬಲ್ ಪಾರ್ಕ್ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ಈ ವರ್ಷದ ಜನವರಿಯಲ್ಲಿ ನೀಡಲಾಗಿದ್ದರೂ ಕಂಪೆನಿ ಜಮೀನು ಮತ್ತು ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ದಾಖಲೆಗಳ ಸಹಿತ ನಾಲ್ಕೈದು ಷರತ್ತುಗಳನ್ನು ಇನ್ನಷ್ಟೇ ಪೂರೈಸಬೇಕಿದೆ.

‘‘ನಾವು ಈಗಾಗಲೇ ಒಂದು ತಿಂಗಳು ಗಡು ವಿಸ್ತರಣೆ ನೀಡಿದ್ದೇವೆ. ಈ ಷರತ್ತು ಪೂರೈಸಲು ಸಾಧ್ಯವಾಗದೇ ಇದ್ದರೆ ಅನುಮತಿ ರದ್ದುಪಡಿಸಬೇಕಾಗುತ್ತದೆ’’ ಎಂದು ಕೇಂದ್ರದ ಆಹಾರ ಸಂಸ್ಕರಣಾ ಇಲಾಖೆಯ ಮುಖ್ಯಸ್ಥ ಜೆ.ಪಿ.ಮೀನಾ ತಿಳಿಸಿದ್ದಾರೆ. ಪತಂಜಲಿಗೆ ಈ ತಿಂಗಳ ಅಂತ್ಯದ ತನಕ ಸಮಯ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News