ಎಂಬಿ ಪಾಟೀಲ್ ಗೆ ತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ವಿಷ ಸೇವಿಸುವ ಬೆದರಿಕೆ

Update: 2018-06-06 08:19 GMT

ಬೆಂಗಳೂರು, ಜೂ.6: ಮಾಜಿ ಸಚಿವ ಮತ್ತು ಕಾಂಗ್ರೆಸ್ ನ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ಗೆ ಸಚಿವ ಸ್ಥಾನ ತಪ್ಪಿದ ಕಾರಣಕ್ಕಾಗಿ ಅವರ ಬೆಂಬಲಿಗರು ಇಂದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್  ಮತ್ತು ಜೆಡಿಎಸ್ ಕೆಲವು  ನಾಯಕರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಬಿ ಪಾಟೀಲ್ ಮನೆಯ ಬಳಿ ಪ್ರತಿಭಟನೆ ನಿರತ ಕೆಲವು ಬೆಂಬಲಿಗರು ಎಂಬಿ ಪಾಟೀಲ್ ಗೆ ಸಚಿವ ಸ್ಥಾನ ನೀಡದಿದ್ದರೆ ವಿಷ ಸೇವಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎಂಬಿ ಪಾಟೀಲ್  ಮನೆಗೆ ತೆರಳಿದ ಕೃಷ್ಣಭೈರೇಗೌಡ ಅವರಿಗೆ ಮುತ್ತಿಗೆ ಹಾಕಿದ ಪಾಟೀಲ್ ಬೆಂಬಲಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಸಚಿವ ಸ್ಥಾನ ತಪ್ಪಿದ ಕಾರಣಕ್ಕಾಗಿ ರಾಜೀನಾಮೆ ನೀಡುವ ಚಿಂತನೆ ನಡೆಸಿರುವ ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮದ್ದೂರಿನಲ್ಲಿ ಶಾಸಕ ಡಿ.ಸಿ.ತಮ್ಮಣ್ಣರಿಗೆ  ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮೈಸೂರು –ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಜೆಡಿಎಸ್ ನ  ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ ದಾಖಲೆಯ 38 ವರ್ಷಗಳಿಂದ ವಿಧಾನಪರಿಷತ್ ಸದಸ್ಯನಾಗಿದ್ದೇನೆ. ಜೆಡಿಎಸ್ ಪಕ್ಷದಲ್ಲಿ ಹಿರಿಯನಿದ್ದೇನೆ. ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಯಾಕಿಲ್ಲ ಎನ್ನುವುದು ಪ್ರಶ್ನೆ. ನನಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇತ್ತು. ಮುಖ್ಯ ಮಂತ್ರಿ  ಎಚ್ ಡಿ ಕುಮಾರಸ್ವಾಮಿ ಮೇಲೆ ನಂಬಿಕೆ ಇತ್ತು. ನಿಷ್ಠೆ ಇದ್ದವರಿಗೆ ಪ್ರೋತ್ಸಾಹ ಇಲ್ಲವೆಂದ್ರೆ ಮನಸ್ಸಿಗೆ ನೋವಾಗುತ್ತದೆ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಸ್ ಶಿವಳ್ಳಿ ಬೆಂಬಲಿಗರು ಕೆಂಗಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಅಜಯ್ ಸಿಂಗ್ ಬೆಂಬಲಿಗರು ಅವರ ಊರಿನಲ್ಲಿ  ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

 ಸಚಿವ ಸ್ಥಾನ ತಪ್ಪಿದ ಕಾರಣಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿರುವ  ಬಿ.ಸಿ.ಪಾಟೀಲ್  ಅವರು ಕಾಂಗ್ರೆಸ್ ತಮಗೆ ವಂಚನೆ ಮಾಡಿದೆ. ಪ್ರಾಮಾಣಿಕರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರದ ಜನತೆ ರಾಜೀನಾಮೆ ನೀಡಲು ಹೇಳಿದರೆ ರಾಜೀನಾಮೆ ನೀಡಲು ಸಿದ್ದ  ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News