ಅಮಿತ್ ಶಾ-ಉದ್ಧವ್ ಭೇಟಿಗೆ ಕೆಲವೇ ಗಂಟೆಗಳ ಮೊದಲು ಬಿಜೆಪಿಯನ್ನು ವ್ಯಂಗ್ಯವಾಡಿದ ಶಿವಸೇನೆ!

Update: 2018-06-06 08:46 GMT

ಮುಂಬೈ, ಜೂ.6: ಬಿಜೆಪಿ ತನ್ನ ಮಿತ್ರಪಕ್ಷಗಳತ್ತ ಕೈಚಾಚುವ `ಸಂಪರ್ಕ್ ಫಾರ್ ಸಮರ್ಥನ್' ಕಾರ್ಯಕ್ರಮದನ್ವಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲು ಕೆಲವೇ ಗಂಟೆಗಳಿವೆ ಎನ್ನುವಾಗ ಶಿವಸೇನೆಯ ಮುಖವಾಣಿ 'ಸಾಮ್ನಾ' ಬಿಜೆಪಿಯ ಕಾರ್ಯಕ್ರಮವನ್ನು ಟೀಕಿಸಿದ್ದೇ ಅಲ್ಲದೆ ತಾನು 2019 ಚುನಾವಣೆಯಲ್ಲಿ  ಸ್ವತಂತ್ರವಾಗಿ ಎದುರಿಸುವುದು ಎಂದು ಹೇಳಿದೆ.

ಬುಧವಾರದ 'ಸಾಮ್ನಾ' ಸಂಪಾದಕೀಯದಲ್ಲಿ ಶಾ ಅವರು ಎನ್‍ಡಿಎ ಮಿತ್ರ ಪಕ್ಷಗಳನ್ನು ಭೇಟಿಯಾಗುತ್ತಿರುವ ಔಚಿತ್ಯವನ್ನು ಶಿವಸೇನೆ ಪ್ರಶ್ನಿಸಿದೆಯಲ್ಲದೆ, ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಕಳಪೆ ನಿರ್ವಹಣೆಯತ್ತ ಬೊಟ್ಟು ಮಾಡಿದೆ. "ಶಿವಸೇನೆ ಪಾಲ್ಘರ್ ಉಪಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸಿದೆ ಇಂತಹ ಸನ್ನಿವೇಶದಲ್ಲಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿ ಅಧ್ಯಕ್ಷರು ಸಂಪರ್ಕ್ ಅಭಿಯಾನ್ ಆಯೋಜಿಸಿರಬಹುದು'' ಎಂದಿದೆ.

"ಬಿಜೆಪಿಯು ಜಾಗತಿಕ ಸಂಪರ್ಕ ಅಭಿಯಾನ ಆರಂಭಿಸಿದೆ, ಪ್ರಧಾನಿ ಮೋದಿ ವಿಶ್ವ ಪರ್ಯಟನೆಯಲ್ಲಿ ತೊಡಗಿದ್ದರೆ, ಶಾ ಅವರು ದೇಶ ಪರ್ಯಟನೆಯಲ್ಲಿದ್ದಾರೆ'' ಎಂದು ಶಿವಸೇನೆ ಬಿಜೆಪಿಯನ್ನು ವ್ಯಂಗ್ಯವಾಡಿದೆ. "ಬಿಜೆಪಿ ದೇಶದ ಜನರೊಡನೆ ಸಂಪರ್ಕ ಕಳೆದುಕೊಂಡಿದೆ ಇದೇಕೆ ಹೀಗಾಗಿದೆ ಎಂದು ಅದು ಅವಲೋಕಿಸಬೇಕಿದೆ'' ಎಂದು 'ಸಾಮ್ನಾ'ದಲ್ಲಿ ಬರೆಯಲಾಗಿದೆ.

"ಬಿಜೆಪಿ ಒಬ್ಬ ಉದ್ಯಮಿಯಂತೆ  ತಾನು ಯಾರೊಡನೆ ಸಂಪರ್ಕದಲ್ಲಿರಬೇಕು ಅಥವಾ ಇರಬಾರದು ಎಂಬ ಲೆಕ್ಕಾಚಾರ ಹಾಕುತ್ತಿದೆ''ಎಂದೂ ಸಾಮ್ನಾ ಹೇಳಿದೆ. ಅಮಿತ್ ಶಾ ಇಂದು ಸಂಜೆ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ  ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News