ಸಮ್ಮಿಶ್ರ ಸರಕಾರದ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

Update: 2018-06-06 12:58 GMT

ಬೆಂಗಳೂರು, ಜೂ. 6: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟಕ್ಕೆ ಎಚ್.ಡಿ. ರೇವಣ್ಣ, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಬಂಡೆಪ್ಪ ಕಾಶಂಪೂರ್, ಕೆ.ಜೆ. ಜಾರ್ಜ್, ಝಮೀರ್ ಅಹ್ಮದ್‌ ಖಾನ್, ಎನ್.ಮಹೇಶ್, ಜಯಮಾಲಾ ಸೇರಿದಂತೆ 25 ಮಂದಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ನೂತನವಾಗಿ ಸೇರ್ಪಡೆಯಾಗಿದ್ದಾರೆ.

ಬುಧವಾರ ಮಧ್ಯಾಹ್ನ 2:12ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ನೂತನ ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧನೆ ಮಾಡಿದರು.

ಪ್ರದೇಶವಾರು, ಜಾತಿವಾರು, ಹಿರಿಯ-ಅನುಭವಿಗಳು ಹಾಗೂ ಹೊಸಮುಖಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದ್ದು, 8-ಒಕ್ಕಲಿಗ, 4-ಲಿಂಗಾಯತ, 2-ಕುರುಬ, 2-ಮುಸ್ಲಿಮ್, 3-ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಕ್ರೈಸ್ತ, ರೆಡ್ಡಿ, ಉಪ್ಪಾರ, ಬ್ರಾಹ್ಮಣ ಹಾಗೂ ಈಡಿಗ ಸಮುದಾಯದ ತಲಾ ಒಬೊಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಜೆಡಿಎಸ್: ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ, ಜಿ.ಟಿ.ದೇವೇಗೌಡ, ಎಂ.ಸಿ.ಮನಗೂಳಿ, ಎಸ್.ಆರ್.ಶ್ರೀನಿವಾಸ್, ವೆಂಕಟರಾವ್‌ ನಾಡಗೌಡ, ಸಿ.ಎಸ್. ಪುಟ್ಟರಾಜು, ಸಾ.ರಾ.ಮಹೇಶ್, ಎನ್. ಮಹೇಶ್, ಡಿ.ಸಿ.ತಮ್ಮಣ್ಣ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಕಾಂಗ್ರೆಸ್: ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಶಿವಶಂಕರರೆಡ್ಡಿ, ರಮೇಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಬಿ.ಝಡ್.ಝಮೀರ್ ಅಹ್ಮದ್‌ ಖಾನ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಪುಟ್ಟರಂಗಶೆಟ್ಟಿ, ಜಯಮಾಲಾ ಹಾಗೂ ಪಕ್ಷೇತರ ಸದಸ್ಯ ಶಂಕರ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸಮಾರಂಭ ಮಧ್ಯಾಹ್ನ 2:12ರ ಸುಮಾರಿಗೆ ನಿಗದಿತ ಸಮಯಕ್ಕೆ ಆರಂಭವಾಯಿತು. ಮೊದಲಿಗೆ 2:15ರ ಸುಮಾರಿಗೆ ಜೆಡಿಎಸ್ ಪಕ್ಷದ ಎಚ್.ಡಿ. ರೇವಣ್ಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ನೆರೆದಿದ್ದ ಪಕ್ಷದ ಕಾರ್ಯಕರ್ತರು, ಮತ್ತವರ ಬೆಂಬಲಿಗರ ಶಿಳ್ಳೆ-ಕೇಕೆ, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಆರ್.ವಿ.ದೇಶಪಾಂಡೆ ಭಗವಂತನ ಹೆಸರಿನಲ್ಲಿ, ಡಿ.ಕೆ.ಶಿವಕುಮಾರ್ ಅಜ್ಜಯ್ಯನ ಮಠ, ಜಿ.ಟಿ.ದೇವೇಗೌಡ ಮೈಸೂರಿನ ಚಾಮುಂಡೇಶ್ವರಿ, ಎಂ.ಸಿ.ಮನಗೂಳಿ ಬಸವಣ್ಣ ಮತ್ತು ಅಂಬಾಭವಾನಿ, ಸಿ.ಎಸ್.ಪುಟ್ಟರಾಜು ಜಗನ್ಮಾತೆ ತ್ರಿಪುರ ಸುಂದರಿ, ಎನ್.ಮಹೇಶ್ ಬುದ್ಧ-ಬಸವ-ಅಂಬೇಡ್ಕರ್, ಶಿವಾನಂದಪಾಟೀಲ್ ಬಸವಣ್ಣ ಹಾಗೂ ಝಮೀರ್ ಅಹ್ಮದ್‌ಖಾನ್ ಅಲ್ಲಾಹ್ ಮತ್ತು ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಡಿ.ಕೆ.ಶಿವಕುಮಾರ್ ರೇಶ್ಮೆ ಅಂಗಿ ಮತ್ತು ಪಂಚೆಯಲ್ಲಿ, ಬಿಎಸ್ಪಿಯ ಎನ್.ಮಹೇಶ್ ನೀಲಿ ಬಣ್ಣದ ಅಂಬೇಡ್ಕರ್ ಸೂಟ್ ಧರಿಸಿ, ವೆಂಕಟರಾವ್ ನಾಡಗೌಡ ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಹರ್ಷೊದ್ಘಾರ, ಶಿಳ್ಳೆ ಮತ್ತು ಕೇಕೆ ಹಾಕಿ ಸಂಭವಿಸಿದರು.

ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಂಪುಟ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರುಗಳು ಪುಷ್ಪಾಗುಚ್ಚ ನೀಡಿ ಅಭಿನಂದಿಸಿದರು.

ಅನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ನೂತನ ಸಂಪುಟ ದರ್ಜೆ ಸಚಿವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ರಾಜ್ಯಪಾಲ ವಜೂಭಾಯಿ ವಾಲಾ ಅವರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು.

ಸಂಪುಟ ಸೇರ್ಪಡೆಯಾದ ಸಚಿವರಿಗೆ ಅವರ ಕುಟುಂಬದ ಸದಸ್ಯರು ಸಾಥ್ ನೀಡಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರು ನಡೆಸಿಕೊಟ್ಟರು. ಸಮಾರಂಭದ ಆರಂಭ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ಕಾಂಗ್ರೆಸ್: ಡಿ.ಕೆ.ಶಿವಕುಮಾರ್-ಕನಕಪುರ(ಒಕ್ಕಲಿಗ), ಆರ್.ವಿ.ದೇಶಪಾಂಡೆ-ಹಳಿಯಾಳ(ಬ್ರಾಹ್ಮಣ), ಕೃಷ್ಣಬೈರೇಗೌಡ-ಬ್ಯಾಟರಾಯನಪುರ(ಒಕ್ಕಲಿಗ), ರಾಜಶೇಖರ್ ಪಾಟೀಲ್-ಹುಮುನಾಬಾದ್(ಲಿಂಗಾಯತ), ಶಿವಾನಂದ ಪಾಟೀಲ್-ಬಸವನ ಬಾಗೇವಾಡಿ(ಲಿಂಗಾಯತ), ಬಿ.ಝಡ್.ಝಮೀರ್ ಅಹ್ಮದ್‌ ಖಾನ್- ಚಾಮರಾಜಪೇಟೆ(ಮುಸ್ಲಿಮ್), ಯು.ಟಿ.ಖಾದರ್-ಮಂಗಳೂರು(ಮುಸ್ಲಿಮ್), ಕೆ.ಜೆ.ಜಾರ್ಜ್-ಸರ್ವಜ್ಞ ನಗರ(ಕ್ರೈಸ್ತ), ಪುಟ್ಟರಂಗಶೆಟ್ಟಿ- ಚಾಮರಾಜನಗರ(ಉಪ್ಪಾರ), ಪ್ರಿಯಾಂಕ ಖರ್ಗೆ-ಚಿತ್ತಾಪುರ(ಎಸ್ಸಿ), ವೆಂಕಟ ರಮಣಪ್ಪ -ಪಾವಗಡ (ಭೋವಿ), ರಮೇಶ್ ಜಾರಕಿಹೊಳಿ-ಗೋಕಾಕ್(ಎಸ್ಟಿ), ಶಿವಶಂಕರ ರೆಡ್ಡಿ-ಗೌರಿಬಿದನೂರು(ರೆಡ್ಡಿ) ಜಯಮಾಲ-ಮೇಲ್ಮನೆ ಸದಸ್ಯೆ(ಈಡಿಗ) ಹಾಗೂ ಶಂಕರ್(ಪಕ್ಷೇತರ)-ರಾಣೆಬೆನ್ನೂರು(ಕುರುಬ).

ಜೆಡಿಎಸ್: ಎಚ್.ಡಿ.ರೇವಣ್ಣ-ಹೊಳೆನರಸಿಪುರ(ಒಕ್ಕಲಿಗ), ಜಿ.ಟಿ.ದೇವೇಗೌಡ- ಚಾಮುಂಡೇಶ್ವರಿ (ಒಕ್ಕಲಿಗ) ಎಸ್.ಆರ್. ಶ್ರೀನಿವಾಸ್-ಗುಬ್ಬಿ(ಒಕ್ಕಲಿಗ), ಬಂಡೆಪ್ಪ ಕಾಶೆಂಪೂರ -ಬೀದರ್ ದಕ್ಷಿಣ(ಕುರುಬ), ಸಿ.ಎಸ್.ಪುಟ್ಟರಾಜು-ಮೇಲುಕೋಟೆ (ಒಕ್ಕಲಿಗ), ಎಂ.ಸಿ.ಮನಗೂಳಿ-ಸಿಂಧಗಿ(ಲಿಂಗಾಯತ), ವೆಂಕಟರಾವ್ ನಾಡಗೌಡ -ಸಿಂಧನೂರು(ಲಿಂಗಾಯತ), ಸಾ.ರಾ. ಮಹೇಶ್- ಕೆ.ಆರ್. ನಗರ(ಒಕ್ಕಲಿಗ), ಎನ್.ಮಹೇಶ್ ಬಿಎಸ್ಪಿ-ಕೊಳ್ಳೇಗಾಲ(ಎಸ್ಸಿ) ಹಾಗೂ ಡಿ.ಸಿ.ತಮ್ಮಣ್ಣ- ಮದ್ದೂರು (ಒಕ್ಕಲಿಗ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News