ತುಮಕೂರು: ಜಿಲ್ಲೆಯ ಇಬ್ಬರು ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

Update: 2018-06-06 12:17 GMT

ತುಮಕೂರು.ಜೂ.06: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಮೊದಲು ಸಂಪುಟ ವಿಸ್ತರಣೆ ಬುಧವಾರ ನಡೆದಿದ್ದು, ತುಮಕೂರು ಜಿಲ್ಲೆಯವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಹೊರತು ಪಡಿಸಿ ಕಾಂಗ್ರೆಸ್-ಜೆಡಿಎಸ್‍ನ ತಲಾ ಒಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗುಬ್ಬಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಒಕ್ಕಲಿಗ ಜನಾಂಗಕ್ಕೆ ಸೇರಿದ ಎಸ್.ಆರ್.ಶ್ರೀನಿವಾಸ್ ಹಾಗೂ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪಾವಗಡ ಮೀಸಲು ಕ್ಷೇತ್ರದ ವೆಂಕಟರವಣಪ್ಪ ಅವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಜಿಲ್ಲೆಗೆ ಈ ಬಾರಿ ಒಟ್ಟು ಮೂರು ಸಚಿವ ಸ್ಥಾನ ದೊರೆತಂತಾಗಿದೆ.

ಐತಿಹಾಸಿಕ ಗುಬ್ಬಿಯ ಚನ್ನಬಸವೇಶ್ವರ ದೇವಾಲಯ ಹೊಂದಿರುವ ಈ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಆರ್.ಶ್ರೀನಿವಾಸ್, ಸರಕಾರಿ ಕಲಾ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮುಗಿಸಿದ್ದು, ವ್ಯವಸಾಯದ ಜೊತೆಗೆ ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡವರು. ಮೊದಲಿಗೆ ಸಹಕಾರಿ ಧುರೀಣ ಕೆ.ಎನ್.ರಾಜಣ್ಣ ಅವರ ಪಾಳಯದಲ್ಲಿ ಗುರುತಿಸಿಕೊಂಡು, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.

2004 ರಲ್ಲಿ ಮೊದಲ ಬಾರಿಗೆ ಗುಬ್ಬಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಆನಂತರ ಜೆಡಿಎಸ್ ಪಕ್ಷವನ್ನು ಸೇರಿ 2008-2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು, 2008ರಲ್ಲಿ ಬಿಜೆಪಿಯಿಂದ ಸಚಿವ ಸ್ಥಾನ ಮತ್ತು ಈ ಬಾರಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಹಲವು ದಶಕಗಳ ನಂತರ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಂತಾಗಿದೆ.

ವಿ.ವೆಂಕಟರವಣಪ್ಪ: ಆಂಧ್ರಪ್ರದೇಶದಿಂದ ಸುತ್ತುವರೆದಿರುವ ಗಡಿನಾಡು ಪಾವಗಡದ ಹನುಮಂತನಹಳ್ಳಿ ವೆಂಕಟಪ್ಪ ಅವರ ಮಗ 69 ವರ್ಷದ ವಿ.ವೆಂಕಟರಮಣಪ್ಪ ಎಸ್.ಎಸ್.ಎಲ್.ಸಿಯವರಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು, 2008ರ ಯಡಿಯೂರಪ್ಪ ಸರಕಾರದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯಲಿಲ್ಲವೆಂಬ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ, ಸುಮಾರು 20 ತಿಂಗಳು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ಹಿರಿಯರು ಎಂಬ ಕಾರಣಕ್ಕೆ ಮತ್ತೊಮ್ಮೆ ಅವರಿಗೆ ಅಧಿಕಾರ ಲಭಿಸಿದ್ದು, ಕನ್ನಡ, ತೆಲುಗು ಹೊರತು ಪಡಿಸಿ ಭಾಷೆಗಳ ಪರಿಚಯವಿಲ್ಲದೆ ವೆಂಕಟರವಣಪ್ಪ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News