ನಿಯಮಿತವಾಗಿ ಬಡ ಅಶಕ್ತರ ಕೈ ಸೇರುತ್ತಿಲ್ಲ 'ಮಾಸಾಶನ': ಗಮನ ಹರಿಸುವರೇ ಮುಖ್ಯಮಂತ್ರಿಗಳು?

Update: 2018-06-06 13:19 GMT

ಶಿವಮೊಗ್ಗ, ಜೂ. 6: ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ, ಜೆಡಿಎಸ್ ಪಕ್ಷವು ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನ ಮೊತ್ತ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದೆ. ಇದೀಗ ಆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇದು ಫಲಾನುಭವಿಗಳಲ್ಲಿ ಹೊಸ ನಿರೀಕ್ಷೆ ಮೂಡುವಂತೆ ಮಾಡಿದೆ. 

ಆದರೆ ಪ್ರಸ್ತುತ ನೀಡಲಾಗುತ್ತಿರುವ ಮಾಸಾಶನವು, ನಿಯಮಿತವಾಗಿ ಫಲಾನುಭವಿಗಳ ಕೈ ಸೇರುತ್ತಿಲ್ಲ. ಕಳೆದ ಐದಾರು ತಿಂಗಳನಿಂದ ಸಾಕಷ್ಟು ಏರುಪೇರಾಗುತ್ತಿದೆ. ಇದರಿಂದ ಅಶಕ್ತ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. 'ನಮ್ಮ ಗೋಳು ಹೇಳ ತೀರದಾಗಿದೆ. ಮುಖ್ಯಮಂತ್ರಿಗಳು ಮಾಸಾಶನ ಮೊತ್ತ ಹೆಚ್ಚಳ ಮಾಡುವುದಿರಲಿ, ಸಕಾಲಕ್ಕೆ ತಲುಪಿಸುವತ್ತ ಮೊದಲು ಗಮನಹರಿಸಲಿ' ಎಂದು ಅಶಕ್ತ ಫಲಾನುಭವಿಗಳು ಒತ್ತಾಯಿಸುತ್ತಾರೆ. 

ತಾಂತ್ರಿಕೆ ತೊಂದರೆ: ಸ್ಥಳೀಯ ಆಡಳಿತ ಮೂಲಗಳು ಹೇಳುವ ಪ್ರಕಾರ, 'ಆನ್‍ಲೈನ್ ಮೂಲಕವೇ ಫಲಾನುಭವಿಗಳಿಗೆ ಮಾಸಾಶನ ಮೊತ್ತ ಬಿಡುಗಡೆಯಾಗುತ್ತದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ತಾಂತ್ರಿಕ ಕಾರಣಗಳಿಂದ ನಿಯಮಿತವಾಗಿ ಫಲಾನುಭವಿಗಳಿಗೆ ಮಾಸಾಶನ ಮೊತ್ತ ಕೈಸೇರುತ್ತಿಲ್ಲ. ಈ ಬಗ್ಗೆ ಸ್ಥಳೀಯ ಹಂತದಲ್ಲಿ ಏನೂ ಮಾಡಲಾಗದ ಸ್ಥಿತಿಯಿದೆ. ಬೆಂಗಳೂರಿನ ಸಾಮಾಜಿಕ ಭದ್ರತಾ ಯೋಜನಾ ವಿಭಾಗವೇ ತಾಂತ್ರಿಕ ಸಮಸ್ಯೆ ಪರಿಹರಿಸುವತ್ತ ಕ್ರಮಕೈಗೊಳ್ಳಬೇಕಾಗಿದೆ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತವೆ.  

ತೊಂದರೆ: ಆದರೆ ಕಳೆದ ವರ್ಷದ ನವೆಂಬರ್ ನಿಂದ ಫಲಾನುಭವಿಗಳಿಗೆ ನಿಯಮಿತವಾಗಿ ಮಾಸಾಶನ ಮೊತ್ತ ತಲುಪುತ್ತಿಲ್ಲ. ಒಂದೆರೆಡು ತಿಂಗಳ ವೇತನ ಇಲ್ಲಿಯವರೆಗೂ ಸಂದಾಯವಾಗಿಲ್ಲ. ಕೆಲವೊಮ್ಮೆ 2-3 ತಿಂಗಳ ಮೊತ್ತ ಒಂದೇ ಬಾರಿಗೆ ಜಮೆಯಾಗುತ್ತಿದೆ ಎಂದು ಕೆಲ ಫಲಾನುಭವಿಗಳು ದೂರುತ್ತಾರೆ. 

ಮಾಸಾಶನದ ಅತ್ಯಲ್ಪ ಮೊತ್ತವು ಅದೆಷ್ಟು ಬಡ ಫಲಾನುಭವಿಗಳ ಜೀವನ ನಿರ್ವಹಣೆಯ ಮುಖ್ಯ ಮೂಲವಾಗಿದೆ. ಆದರೆ ನಿಯಮಿತವಾಗಿ ಈ ಮೊತ್ತ ಬಿಡುಗಡಯಾಗದಿರುವುದರಿಂದ ಇಂತಹ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಮತ್ತೆ ಕೆಲ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಪ್ರತಿನಿತ್ಯ ಅಲೆದಾಡುವಂತಾಗಿದೆ. 

ಸಮಸ್ಯೆಯಾಗುತ್ತಿಲ್ಲ: 'ಮಾಸಾಶನಗಳನ್ನು ಖಜಾನೆ - 2 ಎಂಬ ಹೊಸ ವ್ಯವಸ್ಥೆಯ ಮೂಲಕ ತಲುಪಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ನಿಯಮಿತವಾಗಿ ಮಾಸಾಶನ ಫಲಾನುಭವಿಗಳ ಕೈ ಸೇರುತ್ತಿಲ್ಲ. ಕೆಲವೊಮ್ಮೆ ವಿಳಾಸ ವ್ಯತ್ಯಾಸವಾಗಿಯೂ ಮಾಸಾಶನ ತಲುಪದೆ ರದ್ದುಗೊಂಡಿದೆ. ಈ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಸಾಧ್ಯವಾಗದಂತಾಗಿದೆ. ಬೆಂಗಳೂರಿನಲ್ಲಿರುವ ಸಾಮಾಜಿಕ ಭದ್ರತಾ ಯೋಜನಾ ವಿಭಾಗದಿಂದಲೇ ಈ ಸಮಸ್ಯೆ ಪರಿಹಾರವಾಗಬೇಕಾಗಿದೆ' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಸ್ಥಳೀಯ ತಾಲೂಕು ಕಚೇರಿಯ ಅಧಿಕಾರಿಯೋರ್ವರು ಹೇಳುತ್ತಾರೆ. 

ಜೆಡಿಎಸ್ ನೀಡಿದೆ 6000 ರೂ. ಮಾಸಾಶನ ಭರವಸೆ!
ಜೆಡಿಎಸ್ ಪಕ್ಷವು ತನ್ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೆ 6000 ರೂ. ಮಾಸಾಶನ ನೀಡುವುದಾಗಿ ಭರವಸೆ ನೀಡಿದೆ! ಇದೀಗ ಆ ಪಕ್ಷವೇ ಸರ್ಕಾರದ ಭಾಗವಾಗಿರುವುದು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ, ಫಲಾನುಭವಿಗಳಲ್ಲಿ ಹೊಸ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. 

ಈ ನಡುವೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ, ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿರುವ ಮಾಸಾಶನ ಮೊತ್ತದಲ್ಲಿ ಅತ್ಯಲ್ಪ ಏರಿಕೆ ಮಾಡಲಾಗಿದೆ. 500 ರೂ. ತಲುಪುತ್ತಿದ್ದವರಿಗೆ 600 ರೂ. ಲಭ್ಯವಾಗುತ್ತಿದೆ. 75 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದ 1200 ರೂ. ಮೊತ್ತವನ್ನು 1400 ರೂ.ಗೆ ಏರಿಕೆಯಾಗಿದೆ ಎಂದು ತಾಲೂಕು ಆಡಳಿತದ ಮೂಲಗಳು ಮಾಹಿತಿ ನೀಡುತ್ತವೆ. 

ಸಾಲುಸಾಲು ಯೋಜನೆಗಳು... 
ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ, ಬಡ ವರ್ಗಕ್ಕೆ ಸೇರಿದ ಅಶಕ್ತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ನೀಡುವ ಮೂಲಕ, ಅವರ ಜೀವನ ನಿರ್ವಹಣೆಗೆ ನೆರವಾಗುವ ಕಾರ್ಯ ನಡೆಸಿಕೊಂಡು ಬರುತ್ತಿವೆ. ಅದರಂತೆ ವೃದ್ದಾಪ್ಯ, ವಿಧವಾ ವೇತನ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆ, ಮೈತ್ರಿ, ಮನಸ್ವಿನಿ, ಅಂತ್ಯ ಸಂಸ್ಕಾರ, ರಾಷ್ಟ್ರೀಯ ಕುಟುಂಬ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಡಿ ಲಕ್ಷಾಂತರ ಫಲಾನುಭವಿಗಳು ಪ್ರತಿ ತಿಂಗಳು ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. 

ಈ ಹಿಂದೆ ಮಾಸಾಶನ ಮೊತ್ತ ಖಜಾನೆಗೆ ಬಿಡುಗಡೆಯಾಗಿ ಅಲ್ಲಿಂದ ಸಂಬಂಧಿಸಿದ ಕಚೇರಿ ತಲುಪಿ, ಅಂಚೆಯ ಮೂಲಕ ಫಲಾನುಭವಿಗಳ ಕೈ ಸೇರುತ್ತಿತ್ತು. ಇದೀಗ ಈ ವ್ಯವಸ್ಥೆಯನ್ನು ಸಂಪೂರ್ಣ ಆನ್‍ಲೈನ್‍ಗೊಳಿಸಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಕೆಲ ಯೋಜನೆಗಳಡಿ ಆನ್‍ಲೈನ್ ಮೂಲಕ ಅಂಚೆ ಕಚೇರಿ ತಲುಪಿ, ಅಲ್ಲಿಂದ ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗುತ್ತಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News