ಶಿವಮೊಗ್ಗ: ಕೊಚ್ಚಿ ಹೋದ ಕಿರು ಸೇತುವೆ

Update: 2018-06-06 13:20 GMT

ಶಿವಮೊಗ್ಗ, ಜೂ. 6: ಜಿಲ್ಲೆಯಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಗೆ ಶಿವಮೊಗ್ಗ ತಾಲೂಕಿನ  ರಾಷ್ಟ್ರೀಯ ಹೆದ್ದಾರಿಯ ಚೋರಡಿ ಗ್ರಾಮದಿಂದ ಹೊರಬೈಲು-ಸನ್ನಿವಾಸ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆಯ ಕಿರು ಸೇತುವೆ ಕೊಚ್ಚಿಕೊಂಡು ಹೋಗಿದೆ. 

ಇದರಿಂದಾಗಿ ಎರಡೂ ಗ್ರಾಮಗಳ ಗ್ರಾಮಸ್ಥರು ರಸ್ತೆ ಸಂಪರ್ಕ ಇಲ್ಲದೇ ಪರದಾಡುವಂತಾಗಿದೆ. ಇಲ್ಲಿನ ಕಿರು ಸೇತುವೆ ನಾಲ್ಕು ವರ್ಷಗಳ ಹಿಂದೆಯೇ ಭಾರೀ ಮಳೆಯಿಂದ ಹಾನಿಗೀಡಾಗಿತ್ತು. ಆಗಿನ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಸೇತುವೆ ದುರಸ್ಥಿಯನ್ನು ಈವರೆಗೂ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆಯಾಗಿದೆ. ಇನ್ನು ಹೊರಬೈಲು ಗ್ರಾಮದಲ್ಲಿ ಹಾಲಿನ ಡೈರಿ ಇದ್ದು, ಇಲ್ಲಿ ಸಂಗ್ರಹಿಸದ ಹಾಲು ಕೊಂಡೊಯ್ಯಲು ವಾಹನ ಬಾರದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. 

ಶಾಸಕರ ಭೇಟಿ
ರಸ್ತೆ ಸಂಪರ್ಕ ಕಡಿತಗೊಂಡಿರುವ ಮಾಹಿತಿ ತಿಳಿದ ಶಾಸಕ ಅಶೋಕ್ ನಾಯ್ಕ್ ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ಹೊಸದಾಗಿ ಕಿರು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಜಿಪಂ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಮಾಜಿ ಸದಸ್ಯ ಸುಧಾಕರ, ಜಿಪಂ ಎಇಇ, ವೇದಾಂತ ಮತ್ತು ಗ್ರಾಮಸ್ಥರು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News