ಮೇಕ್ ಇನ್ ಇಂಡಿಯಾ ವಿಫಲ, ಎಲ್ಲವೂ ‘ಮೇಡ್ ಇನ್ ಚೈನಾ’: ರಾಹುಲ್ ಗಾಂಧಿ ಟೀಕೆ

Update: 2018-06-06 14:42 GMT

ಮಂದಸೌರ,ಜೂ.6: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಚಾರ ಅಭಿಯಾನಕ್ಕೆ ಬುಧವಾರ ಇಲ್ಲಿ ನಾಂದಿ ಹಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರಲ್ಲದೆ,ಅದು ದೇಶದ ರೈತರನ್ನು ಸಂಕಷ್ಟದಲ್ಲಿ ತಳ್ಳಿದೆ ಎಂದು ಕಿಡಿಕಾರಿದರು. ಮಂದಸೌರ್ ಕಳೆದ ವರ್ಷ ನಡೆದಿದ್ದ ರೈತರ ಪ್ರತಿಭಟನೆಗಳ ಕೇಂದ್ರಬಿಂದುವಾಗಿದ್ದು,ಪೊಲೀಸರ ಗೋಲಿಬಾರ್‌ನಲ್ಲಿ ಆರು ರೈತರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತದ ಮೊದಲ ವರ್ಷದ ಅಂಗವಾಗಿ ಕುಪಿತ ರೈತರು ಪ್ರದೇಶದಲ್ಲಿ ಹತ್ತು ದಿನಗಳ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ರೈತರನ್ನು ಸಂಕಷ್ಟಗಳಿಗೆ ತಳ್ಳಿರುವುದು ಮಾತ್ರವಲ್ಲ,ಕೈಗಾರಿಕಾ ವಲಯಕ್ಕೆ ನೆರವಾಗುವಲ್ಲಿಯೂ ವಿಫಲರಾಗಿದ್ದಾರೆ ಎಂದು ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಸಾಲ ಮನ್ನಾಕ್ಕಾಗಿ ಆಗ್ರಹಿಸುತ್ತಿರುವ ರೈತರನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಆರೋಪಿಸಿದರು.

ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವು ದಯನೀಯ ವೈಫಲ್ಯವನ್ನು ಕಂಡಿದೆ ಮತ್ತು ಚೀನಾ ನಿರ್ಮಿತ ಸರಕುಗಳು ಭಾರತದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿವೆ ಎಂದು ಅವರು ಹೇಳಿದರು.

 ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ರೈತರ ಬದುಕುಗಳನ್ನು ಬದಲಿಸಲಿದೆ ಎಂದ ಅವರು,ಪಕ್ಷವು ಅಧಿಕಾರ ವಹಿಸಿಕೊಂಡ ಹತ್ತು ದಿನಗಳಲ್ಲಿ ಬೆಳೆ ಸಾಲ ಮನ್ನಾ ಮಾಡುವುದಾಗಿ ಮತ್ತು ಪೊಲೀಸ್ ಗೋಲಿಬಾರ್‌ನಲ್ಲಿ ಮೃತ ರೈತರಿಗೆ ನ್ಯಾಯವೊದಗಿಸುವುದಾಗಿ ಭರವಸೆ ನೀಡಿದರು.

ಪಕ್ಷವು ಅಧಿಕಾರಕ್ಕೆ ಬಂದರೆ ‘ಮೇಕ್ ಇನ್ ಮಂದಸೌರ್’ ಉಪಕ್ರಮವನ್ನು ಆರಂಭಿಸುವುದಾಗಿ ಘೋಷಿಸಿದ ಅವರು,ಪ್ರತಿ ಜಿಲ್ಲೆಯಲ್ಲಿಯೂ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಹೊಲಗಳಿಂದ ನೇರವಾಗಿ ಈ ಘಟಕಗಳಿಗೆ ಸಾಗಿಸಬಹುದು ಎಂದರು.

ನಾವು ಅಧಿಕಾರಕ್ಕೆ ಬಂದರೆ ಹತ್ತು ವರ್ಷಗಳಲ್ಲಿ ಚೀನಾ ಮಂದಸೌರ್ ನಲ್ಲಿ ಬೆಳೆದ ಬೆಳ್ಳುಳ್ಳಿಯನ್ನು ಬಳಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News