ರೈತರ ಸಾಲ ಮನ್ನಾ ಯೋಜನೆಯಲ್ಲಿ ತಿದ್ದುಪಡಿ ತರಬೇಕಿದೆ: ಕುರುಬೂರು ಶಾಂತಕುಮಾರ್

Update: 2018-06-06 14:38 GMT

ಮೈಸೂರು,ಜೂ.6: ರಾಜ್ಯ ಸರಕಾರ ರೈತರ ಸಾಲ ಮನ್ನಾ ಯೋಜನೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರಬೇಕಾದ ಅವಶ್ಯಕತೆಯಿದೆ. ಹೀಗಾಗಿ ಸಾಲ ಮನ್ನಾ ಯೋಜನೆ ಹಳ್ಳಿಗಾಡಿನ ಎಲ್ಲ ರೈತರಿಗೆ ಅನುಕೂಲವಾಗುವ ರೀತಿ ಆದೇಶ ಹೊರಡಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ನಗರದ ಗನ್ ಹೌಸ್ ಬಳಿಯಿರುವ ವಿಶ್ವಮಾನವ ಉದ್ಯಾನವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ಸರ್ಕಾರಗಳು ಹಿಂದಿನಿಂದಲೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಅವೈಜ್ಞಾನಿಕವಾಗಿ ನಿಗದಿ ಮಾಡಿದ ಕಾರಣ ರೈತ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರ ಸಾಲದ ಹಣವನ್ನು ಈ ಮೂಲಕ ತುಂಬಿಸಿಕೊಡಲು ಸರ್ಕಾರ ಮುಂದಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಿ ರೈತರ ಬಗ್ಗೆ ತಪ್ಪು ಕಲ್ಪನೆ ಮೂಡುವುದನ್ನು ತಪ್ಪಿಸಿ, ಸಾಲಮನ್ನಾ ಮಾಡಲು ನಿರ್ಧಾರ ಕೈಗೊಂಡಿರುವುದಕ್ಕಾಗಿ ರಾಜ್ಯದ ರೈತರ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಆದರೆ ಸಾಲ ಮನ್ನಾ ಯೋಜನೆಯಲ್ಲಿ ಕೆಲ ತಿದ್ದುಪಡಿಗಳನ್ನು ತರಬೇಕಾಗಿದೆ. ಅದರಂತೆ ಬೆಳೆ ಸಾಲ ಮನ್ನಾ ಅವಧಿಯನ್ನು 2009ರ ಏ.1 ರಿಂದ 2017ರ ಡಿ.31 ರವರೆಗೆ ನಿಗದಿಗೊಳಿಸಿರುವುದರಿಂದ ಹೆಚ್ಚು ರೈತರು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಕಬ್ಬು ಬೆಳೆಗಾರರರೈತರಿಗೆ ಸಕ್ಕರೆ ಕಾರ್ಖಾನೆ ಮಾಲಿಕರು ವಿಳಂಬವಾಗಿ ಹಣ ಪಾವತಿ ಮಾಡಿದ್ದಾರೆ. ಈ ಕಬ್ಬಿನ ಹಣದಿಂದ ರೈತರಿಗೆ ಸಾಲ ವಿಳಂಬವಾಗಿ ನವೀಕರಣವಾಗಿದೆ. ಇದು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಹೀಗಾಗಿ 2005ರ ಏ.1 ರಿಂದ ಆರ್ಥಿಕ ವರ್ಷ 2018ರ ಮಾ.31 ರವರೆಗೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂದರು.

ರೈತರು ಭೂಮಿ ದಾಖಲೆ ಇಲ್ಲದೆ, ಬ್ಯಾಂಕುಗಳಲ್ಲಿ ಚಿನ್ನಾಭರಣ ಅಡಮಾನ ಇಟ್ಟು ಪಹಣಿ ಪತ್ರ ನೀಡಿ ಸಾಲ ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ರೈತರು ಬೆಳೆ ಸಾಲ ಮಾಡಿ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ನ್ಯಾಯಾಲಯಗಳಲ್ಲಿ ದಾವೆ ಹೂಡಿರುವ ಪ್ರಕರಣಗಳಿಗೂ ಸಾಲ ಮನ್ನಾ ಯೋಜನೆ ಅನ್ವಯವಾಗಬೇಕು. ರಾಜ್ಯದ ರೈತರು ಬೆಳೆ ಸಾಲವನ್ನು ಬಹುರಾಷ್ಟ್ರೀಯ ಬ್ಯಾಂಕುಗಳಾದ ಎಚ್.ಡಿ.ಎಫ್.ಸಿ, ಐಸಿಐಸಿಐ, ಐಡಿಬಿಐ ಬ್ಯಾಂಕ್ ಗಳಿಂದ ಪಡೆದಿರುವ ಬೆಳೆಸಾಲ, ನಗರ ಪ್ರದೇಶದ ಸುತ್ತಮುತ್ತ ಇರುವ ಹಳ್ಳಿಯ ರೈತರು ನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲ, ಬಯಲು ಸೀಮೆಯ ರೈತರಿಗೆ ಬೆಳೆ ಸಾಲ ಹೆಚ್ಚು ರೈತರಿಗೆ ದೊರಕಿಲ್ಲ. ಈ ಭಾಗದಲ್ಲಿ ಕೊಳವೆಬಾವಿ ಸಾಲಪಡೆದು ನೀರು ಬಾರದೇ ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ಎರಡನೇ ಹಂತದ ಸಾಲಮನ್ನಾ ಯೋಜನೆಯಲ್ಲಿ ಕೃಷಿಗಾಗಿ ತೆಗೆದುಕೊಂಡಿರುವ ಅಭಿವೃದ್ಧಿ ಸಾಲ, ಪಾಲಿಹೌಸ್ ಸಾಲ, ಕೃಷಿ ಯಂತ್ರೋಪಕರಣಗಳಿಗೆ ತೆಗೆದುಕೊಂಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಿ ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ ಮಾಡಬೇಕು ಎಂದರು. 

ಸಭೆಯಲ್ಲಿ ಅತ್ತಳ್ಳಿ ದೇವರಾಜ್, ನರಸಿಂಹಯ್ಯ, ನಾಗರಾಜು, ರತ್ನಮ್ಮ, ಸುಶೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News