ನಿಪಾಹ್ ವೈರಸ್‌ಗೆ ಬಲಿಯಾದವರ ಅಂತ್ಯಸಂಸ್ಕಾರ ನಡೆಸಿದ ವೈದ್ಯ

Update: 2018-06-06 14:56 GMT

ಕೋಝಿಕ್ಕೋಡ್, ಜೂ.6: ಮಾರಣಾಂತಿಕ ನಿಪಾಹ್ ವೈರಸ್‌ನಿಂದಾಗಿ ಮೃತಪಟ್ಟಿದ್ದ ಕೆಲವರ ಅಂತ್ಯಸಂಸ್ಕಾರವನ್ನು ಸ್ವತಃ ನಡೆಸುವ ಮೂಲಕ ಕೇರಳದ ವೈದ್ಯರೋರ್ವರು ತನ್ನ ಕರ್ತವ್ಯದ ಕರೆಯನ್ನೂ ಮೀರಿ ಮಾನವೀಯತೆಯನ್ನು ಮೆರೆದಿದ್ದಾರೆ.

ನಿಪಾಹ್‌ದಿಂದಾಗಿ ಮೃತಪಟ್ಟಿದ್ದ 12 ಜನರ ಬಂಧುಗಳು ರೋಗವು ತಮಗೂ ಹರಡಬಹುದೆಂಬ ಭೀತಿಯಿಂದ ಅವರ ಅಂತ್ಯಸಂಸ್ಕಾರಗಳನ್ನು ನಡೆಸಲು ಹಿಂಜರಿದಿದ್ದರು. ಈ ಶವಗಳ ಅಂತ್ಯಸಂಸ್ಕಾದ ಹೊಣೆಯನ್ನು ಕೋಝಿಕ್ಕೋಡ್ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಆರ್.ಎಸ್.ಗೋಪಕುಮಾರ್ ಅವರೇ ವಹಿಸಿಕೊಂಡಿದ್ದರು. ತಾನು ಮೂರು ಶವಗಳಿಗೆ ವಾಹಕನಾಗಿದ್ದೆ ಮತ್ತು ಅವರ ಅಂತ್ಯಸಂಸ್ಕಾರಗಳನ್ನೂ ನಡೆಸಿದ್ದೆ ಎಂದು ಕುಮಾರ್(41) ಸುದ್ದಿಸಂಸ್ಥೆಗೆ ತಿಳಿಸಿದರು. ನಿಪಾಹ್ ವೈರಸ್ ಕಳೆದ ತಿಂಗಳು ಕೋಝಿಕ್ಕೋಡ್ ನಲ್ಲಿ 14 ಮತ್ತು ನೆರೆಯ ಮಲಪ್ಪುರಂ ಜಿಲ್ಲೆಯಲ್ಲಿ 3 ಜೀವಗಳನ್ನು ಬಲಿ ತೆಗೆದುಕೊಂಡಿತ್ತು.

ಸತ್ತವರ ಪೈಕಿ 17 ವರ್ಷದ ಬಾಲಕನೋರ್ವ ಸೇರಿದ್ದು,ಶಂಕಿತ ವೈರಸ್ ಸೋಂಕಿನಿಂದಾಗಿ ಆತನ ತಾಯಿಯನ್ನು ಆಸ್ಪತ್ರೆಯಲ್ಲಿನ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಕೊನೆಯ ಬಾರಿ ಮಗನ ಮುಖವನ್ನೂ ನೋಡಲು ಆಕೆಗೆ ಸಾಧ್ಯವಾಗಿರಲಿಲ್ಲ ಮತ್ತು ಅಂತ್ಯಸಂಸ್ಕಾರವನ್ನು ನಡೆಸಲು ಕುಮಾರ್‌ಗೆ ಅನುಮತಿ ನೀಡಿದ್ದರು.

‘‘ಬಾಲಕನ ಅಂತ್ಯಸಂಸ್ಕಾರ ನಡೆಸಲು ಆತನ ಬಂಧುಗಳಾರೂ ಇಲ್ಲದಿದ್ದುದು ನನಗೆ ತೀವ್ರ ದುಃಖವನ್ನುಂಟು ಮಾಡಿತ್ತು. ನಾನು ಬೇರೆ ವಿಚಾರವನ್ನೇ ಮಾಡಲಿಲ್ಲ. ಆತನ ಅಂತ್ಯಸಂಸ್ಕಾರ ಎಲ್ಲ ಘನತೆಗಳಿಂದ ಕೂಡಿರಬೇಕು ಎಂದು ನಾನು ಬಯಸಿದ್ದೆ,ಹೀಗಾಗಿ ಹಿಂದು ಧರ್ಮದ ಪ್ರಕಾರ ಎಲ್ಲ ವಿಧಿಗಳನ್ನು ನಾನೇ ಪೂರೈಸಲು ನಿರ್ಧರಿಸಿದ್ದೆ. ಅದು ನನ್ನ ಕರ್ತವ್ಯವಾಗಿತ್ತು’’ ಎಂದು ಕುಮಾರ್ ಹೇಳಿದರು.

53 ವರ್ಷ ಪ್ರಾಯದ ಪುರುಷನೋರ್ವನ ಅಂತ್ಯಸಂಸ್ಕಾರದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಬಂಧುಗಳು ತಿಳಿಸಿದ ಬಳಿಕ ಆತನ ಅಂತ್ಯಸಂಸ್ಕಾರವನ್ನು ಕುಮಾರ್ ಅವರೇ ಖುದ್ದಾಗಿ ನೆರವೇರಿಸಿದ್ದರು.

19ರ ಹರೆಯದ ಯುವತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಆಕೆಯ ಪತಿಗೆ ನೆರವಾದ ಸಂದರ್ಭವು ಅವರ ಹೃದಯವನ್ನು ಕಲಕಿತ್ತು. ವಿಷ ಸೇವಿಸಿದ್ದ ಕರ್ನಾಟಕ ಮೂಲದ ಯುವತಿಯನ್ನು ಕೋಝಿಕ್ಕೋಡ್ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಅದೇ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ ಕೆಲವು ರೋಗಿಗಳು ನಿಪಾಹ್ ಪೀಡಿತರಾಗಿದ್ದರು ಎನ್ನುವುದು ನಂತರ ತಿಳಿದುಬಂದಿತ್ತು.

ಮೃತ ಯುವತಿಯ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು,ಆಕೆ ನಿಪಾಹ್ ಪೀಡಿತಳಾಗಿರಲಿಲ್ಲ ಎಂದು ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News