ನೂತನ ಸಚಿವರ ಹಿನ್ನೆಲೆ- ಕಿರು ನೋಟ

Update: 2018-06-06 16:35 GMT

ಬೆಂಗಳೂರು, ಜೂ. 6: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ 25 ಮಂದಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ನೂತನವಾಗಿ ಸೇರ್ಪಡೆಯಾಗಿದ್ದಾರೆ.

ಬುಧವಾರ ಮಧ್ಯಾಹ್ನ 2:12ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ನೂತನ ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧನೆ ಮಾಡಿದರು.

ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಮಾಹಿತಿ ಇಲ್ಲಿದೆ 

ಎಚ್.ಡಿ.ರೇವಣ್ಣ
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎರಡನೆ ಪುತ್ರರಾದ ಎಚ್.ಡಿ.ರೇವಣ್ಣ, ಹಾಸನ ಜಿಲ್ಲೆ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೆ ಬಾರಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳದ (ಕೆಎಂಎಫ್) ಅಧ್ಯಕ್ಷರಾಗಿ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಇಂಧನ ಮತ್ತು ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ.

ಸಿ.ಎಸ್.ಪುಟ್ಟರಾಜು
ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿ.ಎಸ್.ಪುಟ್ಟರಾಜು ಅವರು, ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಹಿಂದೆ ಪಾಂಡವಪುರ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದು, ಮೊದಲಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ಸಾ.ರಾ.ಮಹೇಶ್
ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದಿಂದ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸಾ.ರಾ.ಮಹೇಶ್ ಅವರು, ಮೊದಲ ಬಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಿ.ಟಿ.ದೇವೇಗೌಡ
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಹಿಂದೆ ಸಹಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, 2007ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ದೇವೇಗೌಡ, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ ಕೀರ್ತಿಗೆ ಭಾಜನರಾಗಿದ್ದು, ಹಿರಿಯ ಶಾಸಕರಾಗಿರುವುದು ಇವರ ಹೆಗ್ಗಳಿಕೆ.

ಬಂಡೆಪ್ಪ ಕಾಶೆಂಪೂರ್
ಬೀದರ್ ಜಿಲ್ಲೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಕಾಶೆಂಪೂರ್ ಅವರು, ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದು, 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಸಚಿವರಾಗಿದ್ದು, ಹಿರಿತನದ ಅನುಭವ ಇವರ ಬೆನ್ನಿಗಿದೆ.

ವೆಂಕಟರಾವ್ ನಾಡಗೌಡ
ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ವೆಂಕಟರಾವ್ ನಾಡಗೌಡ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಸ್.ಆರ್.ಶ್ರೀನಿವಾಸ್(ವಾಸು)
ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಸ್.ಆರ್.ಶ್ರೀನಿವಾಸ್ ಹಿರಿಯ ಶಾಸಕರಾಗಿದ್ದು, ಮೊದಲ ಬಾರಿಗೆ ಸಚಿವರಾಗಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ‘ಆಪರೇಷನ್ ಕಮಲ’ ಸಂಬಂಧ ಆಮಿಷವೊಡ್ಡಿದ ಸಿಡಿ ಬಿಡುಗಡೆ ಮಾಡುವ ಮೂಲಕ ದೊಡ್ಡ ಸುದ್ಧಿಯಾಗಿದ್ದರು.

ಡಿ.ಸಿ.ತಮ್ಮಣ್ಣ
ಮಂಡ್ಯ ಜಿಲ್ಲೆ ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿ.ಸಿ. ತಮ್ಮಣ್ಣ ಹಿರಿಯ ಶಾಸಕರಾಗಿದ್ದು, ಇದೇ ಮೊದಲಬಾರಿಗೆ ಸಚಿವರಾಗಿದ್ದಾರೆ.

ಎಂ.ಸಿ.ಮನಗೂಳಿ
ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಂ.ಸಿ.ಮನಗೂಳಿ ಮೊದಲಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಎನ್.ಮಹೇಶ್
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಾರ್ಟಿ(ಬಿಎಸ್ಪಿ)ಯಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎನ್.ಮಹೇಶ್ ಅವರು, ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಡಿ.ಕೆ.ಶಿವಕುಮಾರ್:
ರಾಮನಗರ ಜಿಲ್ಲೆಯ ಸಾತನೂರು ಮತ್ತು ಕನಕಪುರ ಕ್ಷೇತ್ರದಿಂದ 1989ರಿಂದ 2018ರ ವರೆಗೆ ಸತತವಾಗಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್, ಎಸ್.ಎಂ ಕೃಷ್ಣ ಸರಕಾರದಲ್ಲಿ ಸಹಕಾರ, ನಗರಾಭಿವೃದ್ಧಿ ಸಚಿವರಾಗಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮೂರನೆ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆರ್.ವಿ.ದೇಶಪಾಂಡೆ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟನೆ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆ, 1994ರಿಂದ 2004ರ ವರೆಗೆ ಕೈಗಾರಿಕಾ ಸಚಿವರಾಗಿದ್ದರು. 1999ರ ವರೆಗೆ ಜನತಾ ಪರಿವಾರದಲ್ಲಿದ್ದ ಅವರು, ಅನಂತರ ಕಾಂಗ್ರೆಸ್ ಸೇರ್ಪಡೆ ದೇಶಪಾಂಡೆ, ಎಸ್ಸೆಂ ಕೃಷ್ಣ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಆ ಬಳಿಕ ಸಿದ್ದರಾಮಯ್ಯರ ಸರಕಾರದಲ್ಲಿ ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮೂಲಭೂತ ಸೌಲಭ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದು, ಅತ್ಯಂತ ಹಿರಿಯ ಸಚಿವರೆಂಬ ಹೆಗ್ಗಳಿಕೆ ಇವರದ್ದು.

ಕೃಷ್ಣಬೈರೇಗೌಡ:
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ 2008 ರಿಂದ 2018ರ ವರೆಗೆ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷ್ಣ ಬೈರೇಗೌಡ, ಸಿದ್ದರಾಮಯ್ಯನವರ ಸರಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ಇದೀಗ ಎರಡನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಶೇಖರ್ ಪಾಟೀಲ್:
ಬೀದರ್ ಜಿಲ್ಲೆಯ ಹುಮುನಾಬಾದ್ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಾಜಶೇಖರ್ ಪಾಟೀಲ್ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಶಂಕರ್:
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿರುವ ಆರ್.ಶಂಕರ್, ಈ ಮೊದಲು ಬೆಂಗಳೂರು ಮಹಾ ನಗರ ಪಾಲಿಕೆ ಉಪ ಮಹಾಪೌರರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿ.ಝಡ್.ಝಮೀರ್ ಅಹ್ಮದ್‌ಖಾನ್:
ಬೆಂಗಳೂರು ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 2005ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಝಮೀರ್ ಅಹ್ಮದ್ ಖಾನ್ ಅಲ್ಲಿಂದ 2018ರ ವರೆಗೆ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದಾರೆ. 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಮೊದಲ ಬಾರಿಗೆ ಸಚಿವರಾದ ಅವರು, ಇದೀಗ ಎರಡನೆ ಬಾರಿಗೆ ಸಚಿವರಾಗಿದ್ದಾರೆ.

ರಮೇಶ್ ಜಾರಕಿಹೊಳಿ:
ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೆ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಸರಕಾರದಲ್ಲಿ ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ಇದೀಗ ಎರಡನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಯಮಾಲ:
ಬಹುಭಾಷಾ ನಟಿಯಾಗಿರುವ ಜಯಮಾಲಾ ಅವರನ್ನು 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದು, ಇವರ ಅಧಿಕಾರಾವಧಿ 2020ರ ಜೂನ್‌ಗೆ ಅಂತ್ಯಗೊಳ್ಳಲಿದೆ. ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಇದೀಗ ಮೊದಲ ಬಾರಿಗೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಯು.ಟಿ.ಖಾದರ್:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೆ ಬಾರಿ ಆಯ್ಕೆಯಾಗಿರುವ ಯು.ಟಿ.ಖಾದರ್ ಈ ಹಿಂದಿನ ಸಿದ್ದರಾಮಯ್ಯರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದು, ಇದೀಗ ಎರಡನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೆ.ಜೆ.ಜಾರ್ಜ್:
ಬೆಂಗಳೂರಿನ ಭಾರತೀನಗರ ಹಾಗೂ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಿಂದ ಏಳನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕೆ.ಜೆ.ಜಾರ್ಜ್, ಈ ಹಿಂದೆ ವಿರೇಂದ್ರ ಪಾಟೀಲ್, ಬಂಗಾರಪ್ಪ, ಎಸ್ಸೆಂ ಕೃಷ್ಣ ಹಾಗೂ ಸಿದ್ದರಾಮಯ್ಯ ಸರಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಐದನೆ ಬಾರಿಗೆ ಸಚಿವರಾಗಿದ್ದಾರೆ.

ಪುಟ್ಟರಂಗಶೆಟ್ಟಿ:
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಕ್ಷೇತ್ರದಿಂದ ಮೂರನೆ ಬಾರಿ ಆಯ್ಕೆಯಾಗಿರುವ ಪುಟ್ಟರಂಗಶೆಟ್ಟಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡಿಮೆ ಸಂಖ್ಯೆಯಲ್ಲಿರುವ ಉಪ್ಪಾರ ಸಮುದಾಯದ ಏಕೈಕ ಪ್ರತಿನಿಧಿಯೂ ಆಗಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಪ್ರಿಯಾಂಕ ಖರ್ಗೆ:
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರಿಯಾಂಕ್ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ. ಈ ಹಿಂದಿನ ಸಿದ್ದರಾಮಯ್ಯರ ಸರಕಾರದಲ್ಲಿ ಪ್ರವಾಸೋದ್ಯಮ, ಮಾಹಿತಿ-ತಂತ್ರಜ್ಞಾನ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಎರಡನೆ ಬಾರಿಗೆ ಸಚಿವರಾಗಿದ್ದಾರೆ.

ವೆಂಕಟ ರಮಣಪ್ಪ:
ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ವೆಂಕಟರಮಣಪ್ಪ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2018ರಲ್ಲಿ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡನೆ ಬಾರಿ ಸಚಿವರಾಗಿದ್ದಾರೆ.

ಎನ್.ಎಚ್.ಶಿವಶಂಕರ ರೆಡ್ಡಿ:
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ 1999ರಿಂದ 2018ರ ವರೆಗೆ ಸತತ ಐದನೆ ಬಾರಿಗೆ ಶಾಸಕರಾಗಿದ್ದು, ಹಿಂದಿನ ಸರಕಾರದ ಅವಧಿಯಲ್ಲಿ ವಿಧಾನಸಭಾ ಉಪಸಭಾಧ್ಯಕ್ಷರಾಗಿ ಕೆಲಸ ಮಾಡಿರುವ ಶಿವಶಂಕರ ರೆಡ್ಡಿ, ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಿವಾನಂದಪಾಟೀಲ್:
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ 1994ರಿಂದ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಾನಂದ ಪಾಟೀಲ್, ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News