ರೊಹಿಂಗ್ಯಾ ನಿರಾಶ್ರಿತರ ವಾಪಸಾತಿಗಾಗಿ ಮ್ಯಾನ್ಮಾರ್-ವಿಶ್ವಸಂಸ್ಥೆ ಒಪ್ಪಂದ

Update: 2018-06-06 16:53 GMT

ಯಾಂಗನ್ (ಮ್ಯಾನ್ಮಾರ್), ಜೂ. 6: ಮ್ಯಾನ್ಮಾರ್ ಮತ್ತು ವಿಶ್ವಸಂಸ್ಥೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ಪೈಕಿ ಕೆಲವರ ವಾಪಸಾತಿಗೆ ಇದು ಹಾದಿ ಮಾಡಿಕೊಡಲಿದೆ ಎನ್ನಲಾಗಿದೆ.

ಬುಧವಾರ ಸಹಿ ಹಾಕಲಾದ ಒಪ್ಪಂದವು, ರೊಹಿಂಗ್ಯಾ ನಿರಾಶ್ರಿತರ ‘‘ಸ್ವಯಂಪ್ರೇರಿತ, ಸುರಕ್ಷಿತ, ಘನತೆಯುತ ಹಾಗೂ ಖಾಯಂ’’ ವಾಪಸಾತಿಗಾಗಿ ಪರಿಸರವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ ‘ಸಹಕಾರ ಚೌಕಟ್ಟೊಂದನ್ನು’ ಸ್ಥಾಪಿಸುವ ಭರವಸೆಯನ್ನು ನೀಡಿದೆ.

ಮ್ಯಾನ್ಮಾರ್‌ನ ಭದ್ರತಾ ಪಡೆಗಳು ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರಗೈದಿವೆ, ಅವರನ್ನು ಕೊಂದಿವೆ, ಹಿಂಸಿಸಿವೆ ಹಾಗೂ ಅವರ ಮನೆಗಳನ್ನು ಸುಟ್ಟು ಹಾಕಿವೆ ಎಂಬುದಾಗಿ ಆರೋಪಿಸಲಾಗಿದೆ.

ವಿಶ್ವಸಂಸ್ಥೆ ಮತ್ತು ಅಮೆರಿಕಗಳು ಕಳೆದ ವರ್ಷದ ಆಗಸ್ಟ್‌ನಲ್ಲಿ ಆರಂಭಗೊಂಡ ಸೇನಾ ಕಾರ್ಯಾಚರಣೆಯನ್ನು ‘ಜನಾಂಗೀಯ ನಿರ್ಮೂಲನ’ ಎಂಬುದಾಗಿ ಬಣ್ಣಿಸಿವೆ.

ರೊಹಿಂಗ್ಯಾ ವಾಪಸಾತಿ ಕೈಗೆತ್ತಿಕೊಳ್ಳಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳು ಕಳೆದ ವರ್ಷದ ನವೆಂಬರ್‌ನಲ್ಲಿ ಒಪ್ಪಿದ್ದವು. ಆದರೆ ಅಂತಾರಾಷ್ಟ್ರೀಯ ನಿಗಾ ಇಲ್ಲದಿದ್ದರೆ ಮ್ಯಾನ್ಮಾರ್‌ನಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಭೀತಿಯನ್ನು ರೊಹಿಂಗ್ಯಾ ನಿರಾಶ್ರಿತರು ವ್ಯಕ್ತಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News