ಚಾಮರಾಜನಗರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ವಿಶ್ವ ಪರಿಸರ ದಿನ ಆಚರಣೆ

Update: 2018-06-06 16:56 GMT

ಚಾಮರಾಜನಗರ, ಜೂ.6: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಕಾಡಹಳ್ಳಿಯಲ್ಲಿ  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಸಸಿಗಳನ್ನು ನೆಟ್ಟು, ಮಹಿಳಾ ಸಂಘದ  ಸದಸ್ಯರು ಮತ್ತು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ  ಕುರಿತು ಮಂಗಳವಾರ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. 

ನಗರದ ಸಮೀಪದ ಕಾಡಹಳ್ಳಿಯಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬೇಬಿ ಅವರು, ಮೊದಲಿಗೆ  ಶಾಲಾವರಣದಲ್ಲಿ ಹೊಂಗೆ, ಸೀಬೆ, ಮಾವು ಹಾಗು ಇತರೇ ಅಲಂಕಾರಿಕ ಗಿಡಗಳನ್ನು ನೆಟ್ಟು ನೀರು ಹಾಕಿದರು. ಬಳಿಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ಮಾಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಬಳಿಕ ಮಾತನಾಡಿದ ಅವರು, ಪರಿಸರವನ್ನು ನಾವು ಸಂರಕ್ಷಣೆ ಮಾಡಿದ್ದಷ್ಟು ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮರ ಕಡಿಯುವುದು ಬಹಳ ಸುಲಭ.  ಆದರೆ  ಕಡಿತ ಮರದ ಸ್ಥಳದಲ್ಲೇ ಮತ್ತೊಂದು ಗಿಡವನ್ನು ನೆಟ್ಟು ಪೋಷಣೆ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಇದರಿಂದ ಪರಿಸರ ಪ್ರಜ್ಞೆ ಮೂಡುತ್ತದೆ. ಮನುಷ್ಯನ ದುರಾಸೆಗಾಗಿ ಪರಿಸರ, ಜೀವ ಸಂಕುಲ ನಶಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮೇಲ್ವಿಚಾರಕ ಎನ್.ಆರ್. ಸುಧೀರ್, ಮುಖ್ಯ ಶಿಕ್ಷಕಿ ಭಾಗ್ಯರತ್ನಮ್ಮ, ಸಹ ಶಿಕ್ಷಕರಾದ ಗಾಯಿತ್ರಿ, ಭಗೀರತಮ್ಮ, ಜಯನಂದಸ್ವಾಮಿ, ಗೌರಮ್ಮ, ನಾಗರತ್ನಮ್ಮ,  ಸೇವಾ ಪ್ರತಿನಿಧಿ ಮೋಹನ್‍ಕುಮಾರ್, ಸುಂದರಮ್ಮ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News