ಶ್ರೀಮಂತಿಕೆ, ಅಧಿಕಾರವನ್ನು ಪ್ರೀತಿಸುವ ಸಮಾಜವೇ ಭ್ರಷ್ಟಾಚಾರಕ್ಕೆ ಕಾರಣ: ನ್ಯಾ.ಸಂತೋಷ ಹೆಗ್ಡೆ

Update: 2018-06-06 17:11 GMT

ತುಮಕೂರು,ಜೂ.06: ಇಂದಿನ ಮಿತಿಮೀರಿದ ಭ್ರಷ್ಟಾಚಾರಕ್ಕೆ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪ್ರೀತಿಸುವ ಸಮಾಜವೇ ಕಾರಣ ಎಂದು ಕರ್ನಾಟಕ ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮತ್ತು ಮಾಧ್ಯಮ-ಚುನಾವಣೆಗಳು ಕುರಿತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಭ್ರಷ್ಟಾಚಾರಕ್ಕೆ ವ್ಯಕ್ತಿಗಳು ಕಾರಣರಲ್ಲ. ಹಣ ಮತ್ತು ಅಧಿಕಾರವನ್ನು ಪ್ರೀತಿಸುವ ಸಮಾಜವೇ ನೇರೆ ಹೊಣೆ ಎಂದರು.

ಯುವಜನತೆ ದುರಾಸೆಯಿಂದ ದೂರವಾದಷ್ಟು ಈ ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ. ನಾನು ಕರ್ನಾಟಕ ಲೋಕಾಯುಕ್ತಕ್ಕೆ ನ್ಯಾಯಮೂರ್ತಿಯಾಗಿ ಬರುವವರೆಗೆ ನನಗೂ ಭ್ರಷ್ಟಾಚಾರದ ಅರಿವು ಆಗಿರಲಿಲ್ಲ. ಆದರೆ ಆ ನಂತರದಲ್ಲಿ ಅದರಲ್ಲಿಯೂ ಸರಕಾರದ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರದ ಅಗಾಧ ಪರಿಚಯವಾಯಿತು. 50ರ ದೆಶಕದಲ್ಲಿ ಲಕ್ಷ ರೂಗಳಲ್ಲಿ ಇದ್ದ ಭ್ರಷ್ಟಾಚಾರ, ಇಂದು ಲಕ್ಷ ಕೋಟಿ ರೂಗಳಿಗೆ ತಲುಪಿದೆ. ಅವರ ಬಳಿ ಇರುವುದು ನ್ಯಾಯದ ಮಾರ್ಗದಿಂದ ದುಡಿದ ಶ್ರೀಮಂತಿಕೆಯೇ ಎಂಬುದನ್ನು ತಿಳಿಯದೆ ಅವರನ್ನು ಬೆಂಬಲಿಸುವುದರಿಂದ, ಇಂದು ಭ್ರಷ್ಟಾಚಾರಿಗಳು ಸೆಲಬ್ರೆಟಿಗಳಾಗಿ ಮಿಂಚುತ್ತಿದ್ದಾರೆ. ಇದು ದೇಶದಲ್ಲಿ ವೇಗವಾಗಿ ವೃದ್ದಿಗೊಳ್ಳುತ್ತಿರುವ ಅಪಾಯಕಾರಿ ಬೆಳವಣಿಗೆಯಾಗಿದೆ. ವಿಜಯಮಲ್ಯ, ನೀರವ್ ಮೋದಿ ಅವರ ಸ್ಥಿತಿ ಏನಾಗಿದೆ ಎಂಬುದನ್ನು ಯುವಜನರು ಅರ್ಥೈಸಿಕೊಳ್ಳಬೇಕೆಂದು ಎಂದು ನ್ಯಾ.ಸಂತೋಷ ಹೆಗ್ಡೆ ಎಚ್ಚರಿಸಿದರು.

ಮಾನವೀಯತೆ ಮನುಷ್ಯನ ಮೊದಲ ಅದ್ಯತೆಯಾಗಬೇಕಿದೆ. ಆದರೆ ವಿದ್ಯಾವಂತ ಜನರಲ್ಲಿಯೇ ಅದು ಕಡಿಮೆಯಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಲಕ್ಷಾಂತರ ಪೀಸು ಕಟ್ಟಿ ಓದಿ, ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಅಷ್ಟೇ ಲಕ್ಷದ ಸಂಬಳ ಪಡೆಯುವುದೇ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಲಂಚ ನೀಡಿ ಉದ್ಯೋಗ ಪಡೆದು, ನೀಡಿದ ಲಂಚ ಪಡೆದುಕೊಳ್ಳಲು ಬಡಜನರನ್ನು ಹಿಂಸಿಸುವುದು ಸಹ ಅಮಾನವೀಯ ಗುಣ. ಇದರಿಂದ ಯುವಜನರನ್ನು ಹೊರತರದಿದ್ದರೆ, ದೇಶಕ್ಕೆ ಉಳಿಗಾಲವಿಲ್ಲ ಎಂದು ಅವರು ನುಡಿದರು.

ಖಾದ್ರಿ ಶಾಮಣ್ಣ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಮಾತನಾಡಿ, ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದೆ. ಪತ್ರಿಕೆಗಳು,  ಸುದ್ದಿವಾಹಿನಿಗಳು ಉದ್ಯಮಿಗಳ ಕೈ ಸೇರಿ, ರಾಜೀ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ದೊಡ್ಡ ಆತಂಕವನ್ನು ಎದುರಿಸುತ್ತಿದೆ. ನಮಗೆ ಹಿರಿಯರು ರಾಜಕಾರಣಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಿ, ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದರು. ಆದರೆ ಇಂದು ಪರಿಸ್ಥಿತಿಯೇ ಬದಲಾಗಿದ್ದು, ದೇಶ ದೊಡ್ಡ ಅಪಾಯವನ್ನು ಎದುರಿಸುತ್ತಿದೆ. ನಿಜವಾದ ಅರ್ಥದಲ್ಲಿ ಪ್ರಜಾಪ್ರಬುತ್ವವನ್ನು ಉಳಿಸುತ್ತಿರುವ ಪತ್ರಿಕೆಗಳೆಂದರೆ, ಜಿಲ್ಲಾ ಮಟ್ಟದ ಸ್ಥಳೀಯ ಪತ್ರಿಕೆಗಳು ಮಾತ್ರ ಎಂದರು.

ವೇದಿಕೆಯಲ್ಲಿ ತುಮಕೂರು ವಿವಿ ಉಪಕುಲಪತಿ ಪ್ರೋ.ವೈ.ಎಸ್.ಸಿದ್ದೇಗೌಡ, ಪತ್ರಿಕೋದ್ಯಮಿ ಎಸ್.ನಾಗಣ್ಣ, ಹಾಗೂ ಎಂ.ಕೆ.ಭಾಸ್ಕರರಾವ್ ಅವರ ಕುಟುಂಬವರ್ಗದವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ನಂತರ ಮಾಧ್ಯಮ ಮತ್ತು ಚುನಾವಣೆಗಳು ಕುರಿತ ಸಂವಾದ ಕಾರ್ಯಕ್ರಮ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News