ನಿಮ್ಮ ಪತ್ನಿ/ಪತಿಯ ಎಟಿಎಂ ಕಾರ್ಡ್ ಬಳಸುತ್ತೀರಾದರೆ ಈ ಸುದ್ದಿ ಓದಿ

Update: 2018-06-07 16:41 GMT

ಹೊಸದಿಲ್ಲಿ, ಜೂ.7: ಎಟಿಎಂ ಕಾರ್ಡ್‌ದಾರರನ್ನು ಹೊರತುಪಡಿಸಿ ಅವರ ಸಂಬಂಧಿಕರು ಅಥವಾ ಸಂಗಾತಿ ಪರಸ್ಪರರ ಎಟಿಎಂ ಕಾರ್ಡ್ ಬಳಸುವಂತಿಲ್ಲ ಎಂಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಾದವನ್ನು ಗ್ರಾಹಕರ ನ್ಯಾಯಾಲಯ ಸಮ್ಮತಿಸಿದೆ.

ಬ್ಯಾಂಕಿಂಗ್ ನಿಯಮದ ಪ್ರಕಾರ ಎಟಿಎಂ ಕಾರ್ಡನ್ನು ವರ್ಗಾಯಿಸುವಂತಿಲ್ಲ. ಇದನ್ನು ಖಾತೆ ಹೊಂದಿರುವ ವ್ಯಕ್ತಿಗಳು ಮಾತ್ರ ಉಪಯೋಗಿಸಬಹುದು. ಈ ಪ್ರಕರಣದಲ್ಲಿ ಬೆಂಗಳೂರಿನ ಮಾರತಹಳ್ಳಿ ನಿವಾಸಿ ವಂದನಾ ಎಂಬಾಕೆ ಹೆರಿಗೆ ರಜೆಯಲ್ಲಿದ್ದಾಗ 2013ರ ನವೆಂಬರ್‌ನಲ್ಲಿ 25,000 ರೂ. ಹಣ ಪಡೆಯಲು ತನ್ನ ಎಟಿಎಂ ಕಾರ್ಡ್ ಅನ್ನು ಪತಿಗೆ ನೀಡಿದ್ದರು. ಪತಿ ಸಮೀಪದ ಎಸ್‌ಬಿಎಂ ಎಟಿಎಂನಿಂದ ಹಣ ಪಡೆಯಲು ಮುಂದಾಗಿದ್ದು ಆಗ ಎಟಿಎಂ ಯಂತ್ರದಿಂದ ಬಂದ ಸ್ಲಿಪ್‌ನಲ್ಲಿ 25,000 ರೂ. ಮೊತ್ತ ಖಾತೆಗೆ ಡೆಬಿಟ್ ಆಗಿರುವುದಾಗಿ ತಿಳಿಸಲಾಗಿತ್ತು. ಆದರೆ ಹಣ ಬಂದಿರಲಿಲ್ಲ. ಅವರು ಈ ಬಗ್ಗೆ ಬ್ಯಾಂಕನ್ನು ಸಂಪರ್ಕಿಸಿದಾಗ ಯಂತ್ರದ ಸಮಸ್ಯೆಯಿಂದ ಹೀಗಾಗಿದೆ. 24 ಗಂಟೆಯೊಳಗೆ ಹಣವನ್ನು ಖಾತೆಗೆ ವರ್ಗಾಯಿಸುವುದಾಗಿ ಬ್ಯಾಂಕ್ ಭರವಸೆ ನೀಡಿತ್ತು. ಆದರೆ ಹಣ ಪಾವತಿಯಾಗದಿದ್ದಾಗ ಮತ್ತೆ ಬ್ಯಾಂಕ್‌ಗೆ ದೂರು ನೀಡಿದರು. ಆದರೆ ಈ ವೇಳೆ ಬ್ಯಾಂಕ್‌ನವರು, ಎಟಿಎಂನಿಂದ ಹಣ ಹೊರಬಂದಿದ್ದು ಗ್ರಾಹಕ ಹಣ ಸ್ವೀಕರಿಸಿದ್ದಾರೆ ಎಂದು ಉತ್ತರಿಸಿತು.

ಇದನ್ನು ನಿರಾಕರಿಸಿದ ದಂಪತಿ, ಎಟಿಎಂನ ಸಿಸಿಟಿವಿ ದೃಶ್ಯಾವಳಿ ಸಹಿತ ಮತ್ತೆ ದೂರು ನೀಡಿದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಎಟಿಎಂ ಯಂತ್ರದಿಂದ ಹಣ ಬಂದಿಲ್ಲ ಎಂಬುದು ದೃಢಪಟ್ಟಿದೆ. ಆದರೆ ಹಣ ಪಡೆದವರು ವಂದನಾ ಅಲ್ಲ ಎಂಬುದನ್ನು ಬ್ಯಾಂಕಿನ ತನಿಖಾ ಸಮಿತಿ ಪತ್ತೆಹಚ್ಚಿತು. ಕಾರ್ಡ್ ವರ್ಗಾಯಿಸುವಂತಿಲ್ಲ ಎಂಬ ನಿಯಮವನ್ನು ಉಲ್ಲೇಖಿಸಿದ ಬ್ಯಾಂಕ್ ಹಣ ಮರುಪಾವತಿಸಲು ನಿರಾಕರಿಸಿತು. ಆದರೂ ಪಟ್ಟುಬಿಡದ ವಂದನಾ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಎಸ್‌ಬಿಐ ಎಟಿಎಂ ಕೇಂದ್ರದ 2013 ನವೆಂಬರ್ ತಿಂಗಳ ನಗದು ಪರಿಶೀಲನೆ ವರದಿ ಪಡೆದು ನೋಡಿದಾಗ ಆ ದಿನ ಯಂತ್ರದಲ್ಲಿ 25,000 ರೂ. ಹೆಚ್ಚುವರಿ ನಗದು ಇರುವುದು ದೃಢಪಟ್ಟಿದೆ. ಈ ಪ್ರಕರಣದ ವಿಚಾರಣೆ ಮೂರೂವರೆ ವರ್ಷ ಕೋರ್ಟಿನಲ್ಲಿ ಸಾಗಿದ್ದು ಅಂತಿಮವಾಗಿ 2018ರ ಮೇ 29ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಎಟಿಎಂ ಕಾರ್ಡ್ ವರ್ಗಾಯಿಸುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ವಂದನಾ ಸೆಲ್ಫ್ ಚೆಕ್ ಅಥವಾ ತನ್ನ ಪತಿ ಎಟಿಎಂ ಕಾರ್ಡ್‌ನಿಂದ ಹಣ ಪಡೆಯಬಹುದು ಎಂದು ಪತಿಯ ಹೆಸರಲ್ಲಿ ಅಧಿಕಾರ ಪತ್ರ ನೀಡಬೇಕಿತ್ತು ಎಂದು ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News