ಭಾರೀ ಮಳೆಗೆ ಮುಳುಗಿದ ಮುಂಬೈ

Update: 2018-06-07 17:01 GMT

 ಮುಂಬೈ, ಜೂ. 7: ಮುಂಬೈಯಲ್ಲಿ ಗುರುವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ದಾದರ್, ಪರೇಲ್, ಕಪ್ ಪರಡೆ, ಬಾಂದ್ರಾ, ಬೋರಿವಿಲ್ಲಿ ಹಾಗೂ ಅಂಧೇರಿ ಜಲಾವೃತವಾಗಿವೆ. ಪರಿಸ್ಥಿತಿ ನಿಭಾಯಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಗರಸಭೆಯ ಡೆಪ್ಯುಟಿ ಆಯುಕ್ತ, ಉಪ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ ಎಂದು ಬೃಹನ್ಮಂಬೈ ಮಹಾನಗರ ಪಾಲಿಕೆ ತಿಳಿಸಿದೆ.

 ‘‘ಇದು ಮಾನ್ಸೂನ್ ಪೂರ್ವ ಮಳೆ. ಗೋವಾದ ವರೆಗೆ ಬಂದಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಮಹಾರಾಷ್ಟ್ರ, ಕೊಂಕಣ ಹಾಗೂ 2-3 ದಿನಗಳಲ್ಲಿ ಮುಂಬೈ ತಲುಪಲಿದೆ. ಜೂನ್ 8 ಹಾಗೂ 9ರಂದು ಭಾರೀ ಮಳೆ ಸುರಿಯಲಿದೆ. ಜೂನ್ 10ರಂದು ಮಳೆ ಕಡಿಮೆಯಾಗಲಿದೆ’’ ಎಂದು ಎರಡು ದಿನಗಳ ಹಿಂದೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅದರಂತೆ ಈಗ ಮುಂಬೈಯಲ್ಲಿ ಭಾರೀ ಮಳೆ ಸುರಿದಿದೆ. ಮಳೆಯ ಸಂದರ್ಭ ಯಾವುದೇ ದುರಂತ ಸಂಭವಿಸದಿರಲು ಪೊಲೀಸರು ವಾಹನ ಹೊಂದಿರುವವರಿಗೆ ಮಾರ್ಗದರ್ಶನಗಳನ್ನು ನೀಡಿದ್ದಾರೆ.

 ವಾಕಿ-ಟಾಕಿ ಹಾಗೂ ಪ್ರವಾಹ ರಕ್ಷಣೆ ಸಲಕರಣೆಗಳೊಂದಿಗೆ ಅಧಿಕಾರಿಗಳು ಮುಂಬೈಯಲ್ಲಿ ಕಾರ್ಯಾರಂಭಿಸಿದ್ದಾರೆ. ಪ್ರವಾಹ ಸಂಭವಿಸುವ ಸಾಧ್ಯತೆ ಇರುವುದರಿಂದ ವಾಸ್ತವ್ಯಕ್ಕೆ ಶಾಲೆಗಳನ್ನು ತೆರೆದು ಇರಿಸುವಂತೆ ಅಧಿಕಾರಿಗಳು ಶಾಲೆಯ ಆಡಳಿತ ಮಂಡಳಿಗಳಲ್ಲಿ ಮನವಿ ಮಾಡಿದ್ದಾರೆ. ವಿಮಾನ ಸಂಚಾರ ಬದಲಾವಣೆ ಭಾರೀ ಮಳೆ ಸುರಿಯುತ್ತಿರುವುದರಿಂದ ಜೆಟ್ ಏರ್‌ವೇಸ್‌ನ ಲಂಡನ್-ಮುಂಬೈ ವಿಮಾನ ದಾರಿ ಬದಲಾಯಿಸಿ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿತು.

ರೈಲು ಸಂಚಾರಕ್ಕೆ ಅಡ್ಡಿ ಭಾರೀ ಮಳೆ ರೈಲು ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾದ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಮುಂಬ್ರಾ ಥಾಣೆ ಲೈನ್‌ನಲ್ಲಿ ರೈಲುಗಳು 15ರಿಂದ 20 ನಿಮಿಷ ವಿಳಂಬವಾಗಿ ಸಂಚರಿಸಿತು. ಸೇನಾ ಸಿಬ್ಬಂದಿ ನಿಯೋಜನೆ ಕೊಲಾಬಾ, ವರ್ಲಿ, ಘಾಟ್ಕೋಪರ್, ಟ್ರಾಂಬೆ, ಮಲಾಡ್‌ನಲ್ಲಿ ಪ್ರವಾಹ ಪೀಡಿತರನ್ನು ರಕ್ಷಿಸಲು ಸೇನಾ ಸಿಬ್ಬಂದಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News