ಇದುವರೆಗೂ ನಿಮ್ಮ ಅಧಿಕಾರದಡಿಯಲ್ಲಿ ನಮಗೆ ಅಪಮಾನವೇ ಆಗಿದೆ

Update: 2018-06-08 07:11 GMT

ಭಾಗ-3

ಆದ್ದರಿಂದ ಬ್ರಿಟಿಷ್ ಸರಕಾರದ ಮೇಲೆ ನಂಬಿಕೆ ಇಟ್ಟ ಅಸ್ಪಶ್ಯ ಬಂಧುಗಳಿಗೆ ನಮ್ಮ ಸೂಚನೆ ಏನೆಂದರೆ, ಬ್ರಿಟಿಷರು ನಿಜವಾಗಿ ಶಿಬಿಯ ಅವತಾರವೇ, ಎನ್ನುವುದನ್ನು ಅವರು ಸ್ಪಷ್ಟಪಡಿಸಿಕೊಳ್ಳಬೇಕು. ಒಂದು ಕಡೆ ರಾಜನಿಗೆ ಶರಣಾಗಿ ದಯೆಯನ್ನು ಬೇಡುವ ಪಾರಿವಾಳ ಮತ್ತು ಇನ್ನೊಂದು ಕಡೆ ಶಾಸ್ತ್ರದ ಪ್ರಕಾರ ನನ್ನ ಊಟ ಪಡೆದೇ ಸಿದ್ಧ ಎನ್ನುವ ಗಿಡುಗಪಕ್ಷಿ, ಇವರಿಬ್ಬರ ನಡುವೆ ಸಿಕ್ಕಿಕೊಂಡ ಶಿಬಿ, ಯಾವ ಪ್ರಮಾಣದಲ್ಲಿ ತನ್ನ ಮಾಂಸವನ್ನೇ ತೆಗೆದು ಕೊಟ್ಟು, ತನ್ನ ಜೀವಕ್ಕೆ ಅಪಾಯವಾದರೂ ಪರಿವಾಳದ ರಕ್ಷಣೆ ಮಾಡಲು ತಯಾರಾದ ಹಾಗೆ ತಮ್ಮ ಸ್ವಂತಕ್ಕೇನಾದರೂ ಪರವಾಗಿಲ್ಲ, ಅಸ್ಪಶ್ಯರ ಹಿತವಾಗಲಿ ಎಂದು ಬ್ರಿಟಿಷ್ ಸರಕಾರದ ಉದ್ದೇಶವಿದೆ ಎಂದು ಯಾವ ಅಸ್ಪಶ್ಯರು ಭರವಸೆ ಕೊಡಲು ಸಾಧ್ಯ? ಆ ಬ್ರಿಟಿಷರಿಗೆ ಶರಣಾಗತರಾದಿರಿ, ಆದರೆ ಆ ಬ್ರಿಟಿಷರು ನಿಮಗಾಗಿ ಏನು ಮಾಡಿದ್ದಾರೆ?

ಮುಂಬೈ ಪ್ರಾಂತದಲ್ಲಿ ಇಂಗ್ಲಿಷ್‌ನ ಶಾಸನ ಪ್ರಾರಂಭವಾಗಿ ಒಂದು ಶತಕವೇ ಕಳೆಯಿತು. ಈ ಅವಧಿಯಲ್ಲಿ ಯಾವ ಅಸ್ಪಶ್ಯತೆಯಿಂದ ನಿಮ್ಮ ಮನುಷ್ಯತ್ವ ನಷ್ಟವಾಗಿದೆಯೋ, ಅದರ ಉಚ್ಛಾಟನೆ ಆಗಿದೆಯೇ? ಯಾವ ಅಜ್ಞಾನ ಅಂಧಕಾರದಲ್ಲಿ ನಿಮ್ಮ ದೇಶಬಂಧುಗಳು ನಿಮ್ಮನ್ನು ಇಲ್ಲೀ ತನಕ ಇಟ್ಟಿದ್ದರೋ, ಅ ಅಂಧಕಾರದಿಂದ ಆ ಬ್ರಿಟಿಷರು ಎಷ್ಟು ಜ್ಞಾನದ ಜ್ಯೋತಿಯನ್ನು ಹಚ್ಚಿದರು? ಸರಕಾರದ ದರ್ಬಾರಿನಲ್ಲಿ ಮುಚ್ಚಿದ್ದ ಎಷ್ಟು ಪ್ರವೇಶಾತಿಗಳು ನಿಮಗೆ ಸಿಕ್ಕಿವೆ? ಯಾವ ದಾರಿದ್ರದಲ್ಲಿ ನೀವು ಮುಳುಗಿದ್ದಿರೋ, ಅದರಿಂದ ನಿಮ್ಮನ್ನು ಮೇಲೆತ್ತಿ, ನಿಮ್ಮ ಸುಖ ಸಂಪತ್ತಿನ ಲಭ್ಯಕ್ಕಾಗಿ ಬ್ರಿಟಿಷರು ನಿಮಗೇನು ಮಾಡಿದರು? ಇಂಥ ಇತರ ಪ್ರಶ್ನೆಗಳನ್ನು ಕೇಳಿದರೆ ನಾವೂ ನಕಾರಾತ್ಮಕ ಉತ್ತರವನ್ನೇ ನೀಡಬೇಕಾದೀತು.

ಬ್ರಿಟಿಷರ ಆಳ್ವಿಕೆಯಲ್ಲಿ ಅಸ್ಪಶ್ಯರ ಪರಿಸ್ಥಿತಿಯಲ್ಲಿ ಯಾವ ಆಸೆಯ ಪರಿವರ್ತನೆಯಾಯಿತೋ, ಅದು ಕೇವಲ ಕಾಲಾಯ ತಸ್ಮೈನಮಃ ಎಂದೇ ಹೇಳಬೇಕು. ಅದನ್ನು ನಡೆಸಲು ಇಂಗ್ಲಿಷ್ ಸರಕಾರವು ವಿಶೇಷ ಪ್ರಯತ್ನವನ್ನೇನೂ ಮಾಡಿಲ್ಲ ಎಂದು ನಾವು ಹೇಳಬಹುದು. ಇಷ್ಟೇ ಅಲ್ಲ, ಬ್ರಿಟಿಷರ ಕೈಯಲ್ಲಿ ಅಸ್ಪಶ್ಯೋನ್ನತಿ ಆಗುತ್ತದೆ ಎನ್ನುವ ಆಸೆ ಪಡುವುದೂ ವ್ಯರ್ಥವೇ ಎಂದು ನಮ್ಮ ಅಭಿಪ್ರಾಯ. ಇದರ ಅರ್ಥ ಅಸ್ಪಶ್ಯೋನ್ನತಿ ಬ್ರಿಟಿಷ್ ಸರಕಾರದ ಅಧಿಕಾರದಲ್ಲಿಲ್ಲ ಎಂತಲ್ಲ. ಬ್ರಿಟಿಷ್ ಸರಕಾರ ಮನಸ್ಸು ಮಾಡಿದರೆ ಎಲ್ಲ ಸಾರ್ವಜನಿಕ ವ್ಯವಸ್ಥೆಯಲ್ಲೇ ಅಸ್ಪಶ್ಯರ ಅಸ್ಪಶ್ಯತೆ ಹೋಗಿರುತ್ತಿತ್ತು. ಸೈನ್ಯದಲ್ಲಿ, ಪೊಲೀಸು ಖಾತೆ ಮತ್ತು ಇತರ ಖಾತೆಗಳಲ್ಲಿ ಅವರಿಗೆ ಪ್ರವೇಶ ಸಿಕ್ಕಿರುತ್ತಿತ್ತು. ಶಿಕ್ಷಣದ ಪ್ರಚಾರ ಇಷ್ಟು ಆಗಿದ್ದರೆ ಒಬ್ಬ ಅಸ್ಪಶ್ಯನೂ ನಿರಕ್ಷರಿಯಾಗುತ್ತಿರಲಿಲ್ಲ. ಅಥವಾ ಬಂಜರು ಜಮೀನಿನಲ್ಲಿ ಅಸ್ಪಶ್ಯರ ವಸಾಹತು ಮಾಡಿ ಅವರ ಜೀವನ ಸುಖಮಯವಾಗಿ ಕಳೆಯಲು ಸಹಾಯ ಮಾಡಿರುತ್ತಿದ್ದರು. ಇದರಲ್ಲಿ ಒಂದು ಸಹಾಯವನ್ನೂ ಬ್ರಿಟಿಷರು ಮಾಡಲಿಲ್ಲ. ಇಷ್ಟೇ ಅಲ್ಲ, ಯಾವ ಅಸ್ಪಶ್ಯ ಸೈನ್ಯ ಬ್ರಿಟಿಷರಿಗೆ ಈ ರಾಜ್ಯ ಗೆದ್ದು ಕೊಡಲು ಸಹಾಯ ಮಾಡಿತೋ, ಅವರನ್ನೇ ಬ್ರಿಟಿಷರು ಸೈನ್ಯಕ್ಕೆ ಸೇರಿಸಿಕೊಳ್ಳಲು ನಿಲ್ಲಿಸಿದರು.

ಕೆಲವು ಅಸ್ಪಶ್ಯರು ಹೇಳುವ ಹಾಗೆ ಸ್ಪಶ್ಯರ ವಿರೋಧಕ್ಕಾಗಿ ಹೆದರಿ ಅಸ್ಪಶ್ಯರನ್ನು ಸೇರಿಸಿಕೊಳ್ಳುತ್ತಿಲ್ಲ. ಅಂದರೆ ಬ್ರಿಟಿಷ್ ಸರಕಾರ ಅಸ್ಪಶ್ಯೋನ್ನತಿಗಾಗಿ ಸ್ವಲ್ಪ ಪ್ರಯತ್ನ ಪಟ್ಟರೂ ಅವರ ಮೇಲೆ ಸ್ಪಶ್ಯರ ವಿರೋಧವಾಗುತ್ತಿತ್ತು. ಏನೂ ಮಾಡದಿರುವ ವಾರ ಶನಿವಾರವೆಂಬಂತೆ ಸ್ಪಶ್ಯರ ವಿರೋಧವೇ ಎಲ್ಲದರ ಮೇಲೂ ಹೇರುವ ಸಬೂಬಲ್ಲವೇ? ಹಿಂದೂಸ್ಥಾನದಲ್ಲಿ ಅನೇಕ ಧರ್ಮ, ಅನೇಕ ಜಾತಿ ಮತ್ತು ಅನೇಕ ಧರ್ಮದ ಪಂಥಗಳಿವೆ. ಆದ್ದರಿಂದ ಒಂದು ಜಾತಿಯ ಅಥವಾ ಧರ್ಮದ ಜನರು, ಇನ್ನೊಂದು ಜಾತಿಯ ಅಥವಾ ಧರ್ಮದ ಜನರ ಮೇಲೆ ಹಿಂಸೆ ಮಾಡುತ್ತಾರೆ ಮತ್ತು ಅವರನ್ನು ಅನ್ಯಾಯವಾಗಿ ಪೀಡಿಸುತ್ತಾರೆ ಎಂದೇ ತಾವು ಈ ದೇಶದಲ್ಲಿ ಇರಬೇಕಾಯಿತು ಎಂದು ಬ್ರಿಟಿಷರು ಹೇಳುತ್ತಾರೆ. ಅಂದರೆ ಈ ಅನ್ಯಾಯ ಎಷ್ಟು ದೀರ್ಘವಾದರೆ ಅಷ್ಟು ಒಳ್ಳೆಯದು ಎನ್ನಿಸುವ ಬ್ರಿಟಿಷ್ ಸರಕಾರದ ಅಭಿಪ್ರಾಯ ಸಹಜವಾದದ್ದೇ. ಅವರ ರಾಜಕಾರಣದ ತತ್ವಾನುಸಾರ, ಯಾವತ್ತು ಈ ಸಾಮಾಜಿಕ ಅನ್ಯಾಯ ನಿಲ್ಲುತ್ತದೋ, ಅಂದು ಬ್ರಿಟಿಷ್ ಸರಕಾರದ ಕೊನೆಯ ದಿನವಾಗುತ್ತದೆಂದು ಅವರಿಗೆ ಗೊತ್ತು. ಸಾಮಾಜಿಕ ಅನ್ಯಾಯ ಮತ್ತು ಇಂಗ್ಲಿಷ್ ರಾಜ್ಯ ಹೇಗೆ ಒಂದಕ್ಕೊಂದು ಗಂಟು ಹಾಕಿಕೊಂಡಿದೆಯೋ ಹಾಗೆ, ಸಾಮಾಜಿಕ ಅನ್ಯಾಯ ನಡೆಯುತ್ತಲೇ ಇರುವ ಹಾಗೆ ಅವರು ನೋಡಿಕೊಳ್ಳುತ್ತಿದ್ದಾರೆ.

ಆದ್ದರಿಂದಲೇ ಸ್ಪಶ್ಯರ ಸಬೂಬು ಹೇಳುತ್ತಲೇ ಅಸ್ಪಶ್ಯತೆಯಂತಹ ಅನ್ಯಾಯವನ್ನು ಮುಚ್ಚುತ್ತಿದ್ದಾರೆ ಎಂದು ಯಾರಾದರೂ ಬ್ರಿಟಿಷರ ಮೇಲೆ ಆರೋಪ ಮಾಡಿದರೆ, ಅವರದ್ದು ಮನುಷ್ಯರ ನಿತ್ಯ ವ್ಯವಹಾರದ ವಿರುದ್ಧ ಆಗುತ್ತದೆ ಎಂದು ಪ್ರಯತ್ನಪೂರ್ವಕವಾಗಿ ಹೇಳಲು ಬರುವುದಿಲ್ಲ. ಇಲ್ಲದಿದ್ದರೆ, ಐವತ್ತೇಳರ ದಂಗೆಯನ್ನು ಹಾ ಹಾ ಎನ್ನುವುದರಲ್ಲಿ ಸರಕಾರ ಹೇಗೆ ಮುಟ್ಟುಗೋಲು ಹಾಕಿತೋ.... ರೌಲತ್ ಆ್ಯಕ್ಟ್ ವಿರುದ್ಧ ಪ್ರತೀಕಾರವೆಸಗಿದ ಜನರನ್ನು ಅವರು ಜಲಿಯನ್ ವಾಲಾ ಬಾಗ್‌ನಲ್ಲಿ ಕಗ್ಗೊಲೆ ಮಾಡಿದರೋ, ಸರಕಾರದ ಆ ಬ್ರಿಟಿಷ್ ಅಧಿಕಾರಿಗಳು ಅಸ್ಪಶ್ಯೋನ್ನತಿಯ ಬಾಬತ್ತಿನಲ್ಲಿ ಸ್ಪಶ್ಯರ ವಿರೋಧಕ್ಕಾಗಿ ಭಯಭೀತರಾಗಿದ್ದರೆಂದರೆ ಯಾರೂ ನಂಬಲು ಸಾಧ್ಯವಿಲ್ಲ. ಬ್ರಿಟಿಷ್ ಸರಕಾರಕ್ಕೆ ಒಂದು ವೇಳೆ ನಿಜವಾಗಿಯೂ ಸ್ಪಶ್ಯರ ಭೀತಿ ಇದ್ದು ಅಂಥ ಕೆಲಸವನ್ನು ಸರಕಾರದ ವತಿಯಿಂದಲೇ ಅಸ್ಪಶ್ಯರಿಗೆ ಮಾಡಿದ್ದರೆ ಲಾಭ ಯಾರಿಗಾಗುತ್ತಿತ್ತು? ವ್ಯತಿರಿಕ್ತವಾಗಿ ಬ್ರಿಟಿಷ್ ಸರಕಾರ ಸ್ಪಶ್ಯರ ವಿರೋಧವನ್ನು ಮುಂದೆ ಮಾಡಿಕೊಂಡು ಅಸ್ಪಶ್ಯೋನ್ನತಿಯ ಕೆಲಸವನ್ನು ತಪ್ಪಿಸಿಕೊಂಡರೆ ಅಂಥ ಕರ್ತವ್ಯಪರಾನ್ಮುಖ ಸರಕಾರದ ಮೇಲೆ ವಿಶ್ವಾಸವಿಟ್ಟು ಏನು ಪ್ರಯೋಜನ? ಭಯದಿಂದಲೇ ಎನ್ನಿ, ಬ್ರಿಟಿಷ್ ಸರಕಾರದ ಕೈ ಇರುವ ಪ್ರಭುತ್ವ ನಮಗೆ ಕಿಂಚಿತ್ತೂ ಉಪಯೋಗವಿಲ್ಲದಿದ್ದರೆ, ಆ ಪ್ರಭುತ್ವದ ಕೈ ಹಾಗೇ ಇರಲಿ, ಅದನ್ನು ತೆಗೆಯಬೇಡಿ ಎಂದು ಹೇಳಿದರೆ ಏನು ಅಪಹಾಸ್ಯವಿದೆ? ಅದೇ ರಾಜಕೀಯ ಪ್ರಭುತ್ವ ಬ್ರಿಟಿಷರ ಕೈಯಲಿಲ್ಲದೆ, ಅಸ್ಪಶ್ಯರ ಕೈಯೊಳಗಿದ್ದಿದ್ದರೆ, ಯಾವ ಸುಧಾರಣೆಯನ್ನು ಬ್ರಿಟಿಷ್ ಸರಕಾರ ಮಾಡಿಲ್ಲವೋ, ಯಾವುದು ಆವಶ್ಯಕವಾಗಿ ಮಾಡಬೇಕಾಗಿತ್ತೋ, ಆ ಸುಧಾರಣೆಯನ್ನು ತರುವ ತನಕ ಸುಮ್ಮನೆ ಕೂಡುತ್ತಿರಲಿಲ್ಲ.

ಅವರವರ ಕಲ್ಯಾಣವನ್ನು ಅವರೇ ಮಾಡಿಕೊಳ್ಳಬೇಕೇ ವಿನಃ ಬೇರೆಯವರು ಯಾರೂ ಮಾಡುವುದಿಲ್ಲ. ಈ ನ್ಯಾಯವನ್ನು ನೋಡಿ ಅಸ್ಪಶ್ಯರ ಕಲ್ಯಾಣವನ್ನು ಎಷ್ಟು ಅಸ್ಪಶ್ಯ ಜನರು ಮಾಡಲು ಸಾಧ್ಯವೋ ಅಷ್ಟು ಬ್ರಿಟಿಷರ ಮೇಲ್ವಿಚಾರಣೆಯಲ್ಲಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅಸ್ಪಶ್ಯರು ಸ್ವಂತ ಕಲ್ಯಾಣದ ಕೆಲಸವನ್ನು ಪರಕೀಯರಿಗೆ ಒಪ್ಪಿಸುವ ಬದಲು ಸ್ವಂತವಾಗಿ ಮಾಡುವುದು ವಾಸಿ. ಹಿಂದೂಗಳ ಮೇಲೆ ವಿಶ್ವಾಸವಿಡದಿರುವುದು ಬುದ್ಧಿವಂತಿಕೆ. ಆದರೆ ಬ್ರಿಟಿಷ್ ಸರಕಾರದ ಮೇಲೆ ಅವಲಂಬಿಸುವುದೂ ಬುದ್ಧಿವಂತಿಕೆಯ ಲಕ್ಷಣವಲ್ಲ. ನಿಜವಾದ ಬುದ್ಧಿವಂತಿಕೆ ಯಾರ ಮೇಲೂ ವಿಶ್ವಾಸವಿಡದೆ ಸ್ವಂತದ ಮೇಲೆ ವಿಶ್ವಾಸವಿಡುವುದು ಮೇಲು. ಇಬ್ಬರ ಅಧಿಕಾರದ ಕೆಳಗೆ ಉನ್ನತಿಯಾಗಿಲ್ಲ ಎನ್ನುವುದು ಸತ್ಯ ಆಗಿದ್ದರೆ ಅನುಮಾನವೇ ಸರಿ. ಆದ್ದರಿಂದ ಸ್ವಾವಲಂಬನೆಯೇ ಅಸ್ಪಶ್ಯರ ಧ್ಯೇಯವಾಗಬೇಕು

ಡಾ. ಅಂಬೇಡ್ಕರ್ ಮತ್ತು ಡಾ. ಸೋಲಂಕಿಯವರು ಯಾವ ಅಸ್ಪಶ್ಯವರ್ಗದ ಕಡೆ ಸೈಮನ್ ಕಮಿಷನ್ ಮುಂದೆ ಪುರಾವೆ ನೀಡಿದರೋ, ಅಲ್ಲಿ ಇದೇ ಧ್ಯೇಯವನ್ನು ಮಂಡಿಸಿದ್ದರು. ಆದ್ದರಿಂದಲೇ ಈ ವಿಭಾಗಕ್ಕೆ ಸ್ವರಾಜ್ಯ ಸ್ಥಾಪನೆಯಾದರೆ, ರಾಜಕೀಯ ಅಧಿಕಾರ ಜನತೆಯ ಕೈಯಲ್ಲಿ ಬರುತ್ತದೆ ಎನ್ನುವ ಆಸೆಯಿಂದ ಈ ಬೇಡಿಕೆಯನ್ನು ಮುಂದಿಡಲು ಅವರು ಹಿಂದೆ ಮುಂದೆ ನೋಡಲಿಲ್ಲ. ಇದರ ಮೇಲೆ ಕೆಲವು ಅಸ್ಪಶ್ಯರು ಅನುಮಾನಪಡಬಹುದು. ಈ ಸ್ವರಾಜ್ಯದ ಬೇಡಿಕೆಯಿಂದ ಹಿಂದೂ ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಒತ್ತಾಯ ಅಸ್ಪಶ್ಯರ ಮೇಲೆ ಆಗಬಾರದೆನ್ನುವ ಬ್ರಿಟಿಷ್ ಅಧಿಕಾರದ ಅಡ್ಡ ಸುದರ್ಶನ ಚಕ್ರವಾಗಲೀ, ಸ್ವರಾಜ್ಯವೆಂಬ ವಜ್ರಾಯುಧ ವಾಗಲೀ ನಮ್ಮ ಮೇಲೆ ಪ್ರತ್ಯಕ್ಷ ಆಘಾತ ಮಾಡದೆ ಬಿಡದು. ಸ್ವರಾಜ್ಯವೆಂದರೆ ನಮ್ಮದೇ ರಾಜ್ಯವಾಗುತ್ತದೆ. ನಮ್ಮ ದೃಷ್ಟಿಯಲ್ಲಿ ನಮ್ಮ ಮೇಲೆ ಇನ್ನೊಂದು ಅಧಿಕಾರ ವ್ಯರ್ಥ. ಕಾರಣವೇನೆಂದರೆ ಸ್ವರಾಜ್ಯ ಕೇಳುವಾಗ ಅವರು ಬಹುಮಟ್ಟಿಗೆ ತಮ್ಮದೇ ರಾಜ್ಯವಾಗುತ್ತದೆಂದು ಬೇಡಿಕೆಯನ್ನು ಮುಂದೆ ಇಟ್ಟಿದ್ದಾರೆ. ಅಸ್ಪಶ್ಯವರ್ಗದಲ್ಲಿ ತುಂಬ ಪ್ರತಿನಿಧಿಗಳು ಕೇಳಿದರು ಎಂದು, ಸ್ವರಾಜ್ಯವೆಂದರೆ ಅಸ್ಪಶ್ಯರ ಮೇಲಿನ ರಾಜ್ಯವೆಂತಲ್ಲ. ಆದರೆ ರಾಜಕೀಯ ಅಧಿಕಾರದ ಸಾಕಷ್ಟು ಭಾಗ ಅಸ್ಪಶ್ಯರ ಕೈಯಲ್ಲಿ ಬರುತ್ತದೆ. ಸೈಮನ್ ಕಮಿಷನ್ ಮುಂದೆ ಇಟ್ಟ ಯೋಜನೆ ಫಲಪ್ರದವಾದರೆ ಹಿಂದೂಸ್ಥಾನದಲ್ಲಿ ಹಿಂದೆಂದೂ ನಡೆಯದಿದ್ದಂತಹ ಘಟನೆ ಘಟಿಸುತ್ತದೆ. ಅವರ ಉದ್ಧಾರಕ್ಕೆ ರಾಜಕೀಯ ಆಧಾರ ಸಿಗ್ತುತದೆ. ಈ ವಿಷಯ ಅಸ್ಪಶ್ಯೋನ್ನತಿಯ ದೃಷ್ಟಿಯಿಂದ ಏನೂ ಸಣ್ಣದಲ್ಲ. ಆದ್ದರಿಂದ ಇಂಥ ಯೋಜನೆಗೆ ಮೂಗು ಮುರಿಯುವುದಕ್ಕಿಂತ ಮುಂಚೆ ಅಸ್ಪಶ್ಯರು ಪೂರ್ತಿ ವಿಚಾರ ಮಾಡಿ ಎನ್ನುವುದೇ ನಮ್ಮ ಆಗ್ರಹ ಪೂರ್ವಕ ಸೂಚನೆ.

ಸೈಮನ್ ಕಮಿಷನ್‌ಗೆ ಸಹಕಾರ ನೀಡಿದ್ದಕ್ಕೆ ಕೆಲವು ರಾಷ್ಟ್ರೀಯ ವೃತ್ತಪತ್ರಕಾರರಿಗೆ ತುಂಬಾ ಸಿಟ್ಟು ಬಂದಿದೆ. ಅಸ್ಪಶ್ಯವರ್ಗ ದವರು ದೇಶದ್ರೋಹಿಗಳು ಎಂದು ಒಂದೇ ಗೊಂದಲ ಎಬ್ಬಿಸಿದ್ದಾರೆ. ನಮಗನ್ನಿಸುತ್ತಿದೆ, ಸ್ವಾಭಿಮಾನ ಎನ್ನುವ ವಸ್ತು ಬರೀ ಮುಂದುವರಿ ದವರಿಗಷ್ಟೇ ಅಲ್ಲ. ಹಿಂದುಳಿದ ವರ್ಗಕ್ಕೂ ಸ್ವಾಭಿಮಾನ ಇದೆ ಮತ್ತು ಅವರ ಆತ್ಮೋದ್ಧಾರದ ಯಾವ ಚಳವಳಿ ನಡೆದಿದೆಯೋ ಅದು ಸ್ವಾಭಿಮಾನದ ಚಳವಳಿಯೇ ಆಗಿದೆ. ಈ ದೃಷ್ಟಿಯಲ್ಲಿ ನೋಡಿದರೆ ಮುಂದುವರಿದ ಜನ ನಡೆಸುತ್ತಿರುವ ಬಹಿಷ್ಕಾರದ ಚಳವಳಿಯಲ್ಲಿ ನಾವೂ ಭಾಗವಹಿಸಲು ಆಗಿದ್ದರೆ ನಮಗೂ ಆನಂದವಾಗುತ್ತಿತ್ತು. ಆದರೆ ಈ ಚಳವಳಿಯಲ್ಲಿ ಅಸ್ಪಶ್ಯರು ಯಾಕೆ ಭಾಗವಹಿಸಲಿಲ್ಲ ಎನ್ನುವ ಕಾರಣ ಸ್ಪಷ್ಟವಾಗಿಯೇ ಇದೆ. ಮುಂದುವರಿದ ಜನಗಳ ನೇಮಕಾತಿ, ಕಮಿಷನ್‌ನಲ್ಲಿದ್ದಿದ್ದರೆ ಅಸ್ಪಶ್ಯರ ಪ್ರಶ್ನೆಯ ಗತಿ ಏನಾಗುತ್ತಿತ್ತು ಎನ್ನುವ ತರ್ಕಕ್ಕೆ ಕಾರಣ ಏನೂ ಉಳಿದಿಲ್ಲ. ನೆಹರೂ ಕಮಿಟಿಯ ವರದಿ ಎಲ್ಲ ಅಸ್ಪಶ್ಯವರ್ಗದ ಕಣ್ಣಮುಂದೆಯೇ ಇದೆ. ನೆಹರೂ ಕಮಿಟಿಯ ವರದಿ ಅಸ್ಪಶ್ಯರಿಗಾಗಿ ಯಾವ ಸವಲತ್ತು ನೀಡಿದೆ? ಮುಸಲ್ಮಾನರ ಪ್ರಶ್ನೆಯ ಮುಂದೆ ಅಸ್ಪಶ್ಯರ ಪ್ರಶ್ನೆ ನೆಹರೂ ಕಮಿಟಿಗೆ ಕಡಿಮೆ ಮಹತ್ವದ್ದು ಅನ್ನಿಸಲಿಲ್ಲವೇ? ಸ್ಪಶ್ಯರ ಸಹಾನುಭೂತಿಯಲ್ಲಿ

ಅಸ್ಪಶ್ಯರ ಹಿತಸಂಬಂಧದ ಗಂಟು ಹಾಕಿ ಕೊಟ್ಟು ತಾವು ಮುಕ್ತರಾದರು. ಈ ಸಹಾನುಭೂತಿ ಎಷ್ಟು ಅವಿಶ್ವಸನೀಯ ಎಂದು ನೆಹರೂ ಕಮಿಟಿ ಯೋಚಿಸಿದ್ದಿದೆಯೇ? ಎಂದೂ ಇಲ್ಲ. ಅಸ್ಪಶ್ಯರ ಪ್ರಶ್ನೆ ಸಾಮಾಜಿಕವಾದದ್ದು, ಶಿಕ್ಷಣದಿಂದ ಬಗೆ ಹರಿಯುವುದು, ಅದರ ಬಗ್ಗೆ ವಿಶೇಷ ಯೋಜನೆಯನ್ನು ಮಾಡಬೇಕಾದ ಆವಶ್ಯಕತೆಯಿಲ್ಲ ಎಂದು ತ್ವರಿತ ಅಭಿಪ್ರಾಯವನ್ನು ನೆಹರೂ ಕಮಿಟಿ ಕೊಟ್ಟುಬಿಟ್ಟಿದ್ದಾರೆ. ನೋಡಿದರೆ ಹಾಗೆ ಅಸ್ಪಶ್ಯತೆ ಒಂದು ಸಾಮಾನ್ಯ ವಿಷಯವೇ! ನೆಹರೂ ಕಮಿಟಿಯಲ್ಲಿನ ಸದಸ್ಯರು ಅಥವಾ ಅವರ ಬಂಧುಗಳು ಸ್ವಲ್ಪವಾದರೂ ಸೈಮನ್ ಕಮಿಷನ್‌ನಲ್ಲಿ ಇದ್ದಿದ್ದರೆ, ಯಾವುದು ನೆಹರೂ ಕಮಿಟಿಯಲ್ಲಿ ನಡೆಯಿತೋ, ಅದನ್ನು ಅವರು ಸೈಮನ್ ಕಮಿಷನ್ ಕಡೆಯಿಂದ ಮಾಡಿಸಬಹುದಾಗಿತ್ತು ಎನ್ನುವುದನ್ನು ಬಿಟ್ಟು ಬೇರೆ ವಿಧಿಯಿಲ್ಲ.

ಅಸಲಿ ಯಾರಾದರೊಬ್ಬ ಮುಂದುವರಿದ ಮನುಷ್ಯನನ್ನು ಕಮಿಷನ್‌ನಲ್ಲಿ ನೇಮಕ ಮಾಡಿದ್ದರೆ ಹಿಂದಿ ರಾಷ್ಟ್ರದ ಮಾನ ಉಳಿಯುತ್ತಿತ್ತು, ಅದು ನಿಜ. ಆದರೆ ಅಂಥ ನೇಮಕಾತಿಯಿಂದ ಅಸ್ಪಶ್ಯವರ್ಗದ ಘಾತವಾಗುತ್ತಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ. ‘ಹಾ, ನಮ್ಮ ಮನುಷ್ಯ’ ಇದ್ದಾನೆ ಎನ್ನುವಂತೆ ಒಬ್ಬನಾದರೂ ಮುಂದಾಳು ಇದ್ದಿದ್ದರೆ ಅವನ ನೇಮಕಾತಿ ಬಗ್ಗೆ ನಾವು ಆಗ್ರಹಪೂರ್ವಕವಾಗಿ ಮಾತಾಡಬಹುದಿತ್ತು. ಆದರೆ ನಾವು ಹೇಳಿದಂತೆ ಒಬ್ಬ ಮನುಷ್ಯನೂ ನಮಗೆ ಕಾಣಿಸಲಿಲ್ಲ. ಆದ್ದರಿಂದಲೇ ಯಾರಾದರೊಬ್ಬ ಹಿಂದಿ ಮನುಷ್ಯ ಕಮಿಷನ್‌ನಲ್ಲಿರುವ ಬದಲು, ಹಿಂದೂವಲ್ಲದವನು ಇರುವುದೇ ವಾಸಿ ಎಂದು ನಮಗೆ ಅನಿಸಿದ್ದು ಸುಳ್ಳಲ್ಲ. ಆದ್ದರಿಂದಲೇ ಸೈಮನ್ ಕಮಿಷನ್‌ನ ಸಹಕಾರ್ಯ ಮಾಡಲು ನಾವು ನಿಶ್ಚಯಿಸಿದೆವು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News