ತಮಿಳುನಾಡಿನಲ್ಲಿ ದುನಿಯಾ ವಿಜಯ್ ಬಂಧನ?

Update: 2018-06-08 16:26 GMT

ಬೆಂಗಳೂರು, ಜೂ.8: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಆರೋಪದಡಿ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಬಂಧಿಸಿ, ಕೆಲ ಗಂಟೆಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.

ತಲೆಮರೆಸಿಕೊಂಡಿದ್ದ ನಟ ವಿಜಯ್‌ನನ್ನು ಮೊಬೈಲ್ ಸಂಖ್ಯೆಯ ಟವರ್ ಲೊಕೇಷನ್ ಆಧರಿಸಿ ಶುಕ್ರವಾರ ಬೆಳಗ್ಗೆ ತಮಿಳುನಾಡಿನಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದರು. ಬಳಿಕ ಸೆಕ್ಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಲಾಯಿತು.

ಪ್ರಕರಣದ ವಿವರ: ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆ ಸಹ ನಟರಿಬ್ಬರು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಅವರ ಬಂಧನಕ್ಕೆ ತಾವರೆಕೆರೆ ಪೊಲೀಸರು ತೆರಳಿದ್ದಾಗ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಯ್ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಬಂಧನದ ಭೀತಿಯ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ತಲೆಮರೆಸಿಕೊಂಡಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ವಿಜಯ್ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ತಮಿಳುನಾಡಿನ ರೆಸಾರ್ಟ್‌ವೊಂದರಲ್ಲಿ ವಿಜಯ್ ಇದ್ದರೆಂದು ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದರು.

ಜಾಮೀನು ಮಂಜೂರು: 1 ಲಕ್ಷ ರೂ. ಠೇವಣಿ ಮತ್ತು ವೈಯಕ್ತಿಕ ಬಾಂಡ್ ಆಧಾರದ ಮೇಲೆ 65ನೆ ಸೆಷನ್ಸ್ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.

ದುನಿಯಾ ವಿಜಯ್ ಮತ್ತು ಸುಂದರ್ ಪಿ. ಗೌಡ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಆದೇಶವನ್ನು ಶುಕ್ರವಾರಕ್ಕೆ ಕಾದಿರಿಸಿತ್ತು. ಶುಕ್ರವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿದ ಕೋರ್ಟ್ ದುನಿಯಾ ವಿಜಯ್ ಮತ್ತು ಸುಂದರ್ ಪಿ. ಗೌಡ ಇಬ್ಬರಿಗೂ ನಿರೀಕ್ಷಣಾ ಜಾಮೀನು ಮಂಜೂರು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News