ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಚಿಕ್ಕಮಗಳೂರಿನಾದ್ಯಂತ ಮತದಾನ ಶಾಂತಿಯುತ

Update: 2018-06-08 11:50 GMT

ಚಿಕ್ಕಮಗಳೂರು, ಜೂ.8: ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಾದ್ಯಂತ ತೆರೆಯಲಾಗಿದ್ದ 20 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಸಮೀಪದಲ್ಲಿರುವ ಮಿನಿ ವಿಧಾನಸೌಧ ಹಾಗೂ ಬೇಲೂರು ರಸ್ತೆಯಲ್ಲಿರುವ ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಚುನಾವಣಾಧಿಕಾರಿಗಳು ಎರಡು ಮತಗಟ್ಟೆಗಳನ್ನು ತೆರದಿದ್ದರು. ಮುಂಜಾನೆ 7ಕ್ಕೆ ಮತದಾನ ಆರಂಭವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳ ಬಳಿ ಕಂಡು ಬರಲಿಲ್ಲ. ಮತದಾನ ಪ್ರಕ್ರಿಯೆ ನೀರಸವಾಗಿತ್ತು. ನಂತರ ಬೆಳಗ್ಗೆ 10ರ ಬಳಿಕ ಮತದಾರರು ಮತಗಟ್ಟೆಗಳಿಗೆ ಬರಲಾರಂಭಿಸಿದ್ದರಿಂದ ಮತದಾನ ಬಿರುಸು ಪಡೆದಿತ್ತು. 

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ಶುಕ್ರವಾರ ಬೆಳಗ್ಗೆ ನಗರದ ಜೂನಿಯರ್ ಕಾಲೇಜು ಆವರಣದ ಮತಗಟ್ಟೆ ಎದುರು ಮತದಾರರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಅವರು ಜೂನಿಯರ್ ಕಾಲೇಜಿನ ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. 

ಎರಡೂ ಕ್ಷೇತ್ರಗಳ ಮತದಾನದ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧ ಹಾಗೂ ಜೂನಿಯರ್ ಕಾಲೇಜಿನ ಮತಗಟ್ಟೆ ಕೇಂದ್ರಗಳ ಹೊರಭಾಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಜಿಲ್ಲಾ ನಾಯಕರು ತಂತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಗೆ ಬರುತ್ತಿದ್ದ ಪದವೀಧರ, ಶಿಕ್ಷಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು. ಮತದಾನದ ಹಿನ್ನೆಲೆಯಲ್ಲಿ ನಗರದ ಎರಡೂ ಮತಗಟ್ಟೆಗಳ ಮುಂದೆ ಮೂರೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದರಿಂದ ಆಜಾದ್ ಪಾರ್ಕ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.

ಉಳಿದಂತೆ ಜಿಲ್ಲಾಡಳಿತ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 20 ಮತಗಟ್ಟೆಗಳನ್ನು ತೆರೆದಿದ್ದು, ಈ ಪೈಕಿ ಪದವೀಧರ ಕ್ಷೇತ್ರಕ್ಕೆ 12 ಮತಗಟ್ಟೆಗಳು ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 8 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಚಿಕ್ಕಮಗಳೂರು ನಗರದಲ್ಲಿನ ಎರಡು ಮತಗಟ್ಟೆ ಸೇರಿದಂತೆ ಜಿಲ್ಲೆಯ ಒಟ್ಟು 20 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಮತದಾನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲ ಮತಗಟ್ಟೆಗಳಿಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News