ಚಿಕ್ಕಮಗಳೂರು: ಭಾರೀ ಮಳೆಗೆ ತುಂಬಿ ಹರಿದ ನದಿಗಳು; ಜನಜೀವನ ಅಸ್ತವ್ಯಸ್ತ

Update: 2018-06-08 11:55 GMT

ಚಿಕ್ಕಮಗಳೂರು, ಜೂ.8: ಕಾಫಿನಾಡಿನಲ್ಲಿ ವರ್ಷಧಾರೆ ಬಿರುಸುಗೊಂಡಿದ್ದು, ಜಿಲ್ಲೆಯ ಮಲೆನಾಡಿನಾದ್ಯಂತ ಗುರುವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆ ಶುಕ್ರವಾರವೂ ಮುಂದುವರಿದಿದೆ. ಮಳೆಯ ಆರ್ಭಟದಿಂದಾಗಿ ಮಲೆನಾಡು ಭಾಗದ ತುಂಗಾ, ಭದ್ರಾ ನದಿ ಸೇರಿದಂತೆ ಸಣ್ಣ ಪುಟ್ಟ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಎಡಬಿಡದೇ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರಗಳಲ್ಲಿ ಮುಂಗಾರು ಚುರುಕುಗೊಂಡಿದ್ದು. ಪ್ರತಿದಿನ ತಾಲೂಕಿನ ವಿವಿಧ ಭಾಗಗಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದರೆ ಗುರುವಾರ ರಾತ್ರಿ ಈ ತಾಲೂಕು ವ್ಯಾಪ್ತಿಯ ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಜಯಪುರ, ಶೃಂಗೇರಿ ಪಟ್ಟಣ, ನೆಮ್ಮಾರು, ಕಿಗ್ಗ, ಹರಿಹರಪುರ ಮತ್ತಿತರ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಇಲ್ಲಿ ಶುಕ್ರವಾರವೂ ಮಳೆ ನಿಂತಿಲ್ಲ. ಪರಿಣಾಮ ಮಲೆನಾಡಿನಲ್ಲಿ ಹರಿಯುವ ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಇನ್ನು ಈ ಭಾಗದ ಸಣ್ಣ ಪಟ್ಟ ನದಿಗಳಲ್ಲಂತೂ ನೀರಿನ ಹರಿವು ರಭಸಗೊಂಡಿದ್ದು, ಕೆಲವೆಡೆ ರಸ್ತೆಯ ಮೇಲೆಯೇ ಹಳ್ಳಗಳ ನೀರು ಹರಿದು ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡಚಣೆಯಾದ ಬಗ್ಗೆ ವರದಿಯಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಮಲೆನಾಡಿನ ತುಂಗಾ, ಭದ್ರಾ ನದಿಗಳೂ ಸೇರಿದಂತೆ ಸಣ್ಣಪುಟ್ಟ ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯಲಿವೆ ಎನ್ನಲಾಗುತ್ತಿದೆ. 

ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸಂಚಾರ ವಿರಳವಾಗಿತ್ತು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ತೋಟಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಮಳೆಯ ಅಬ್ಬರದಿಂದಾಗಿ ಕೆಲಸಕ್ಕೆ ಹೊರಡುತ್ತಿದ್ದ ದೃಶ್ಯ ಕಂಡು ಬರಲಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರೂ ಕೂಡ ಮನೆ ಬಿಟ್ಟು ಹೊರಬಾರದಂತಾಗಿತ್ತು. 

ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ತಾಲೂಕು ಈ ಹಿಂದೆ ಬರದಿಂದ ತತ್ತರಿಸಿದ್ದವು. ಆದರೆ ಈ ಬಾರಿ ವರುಣ ಕೃಪೆ ತೋರಿರುವುದರಿಂದ ಎರಡೂ ತಾಲೂಕುಗಳಲ್ಲಿ ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಈ ಭಾಗದ ಕೆರೆ ಕಾಲುವೆಗಳಲ್ಲಿ ಜೀವ ಜಲ ಕಾಣಲು ಸಾಧ್ಯವಾಗಿದ್ದು, ರೈತರು ಕಳೆದೊಂದು ತಿಂಗಳಿನಿಂದ ಎಡಬಿಡದೇ ಕೃಷಿಯಲ್ಲಿ ತೊಡಗಿದ್ದರು. ಈ ಭಾಗಗಲ್ಲಿ ಕಳೆದ 1 ವಾರದಿಂದ ಸಂಜೆಯ ವೇಳೆ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಕಡೂರು ಸೇರಿದಂತೆ ಬೀರೂರು, ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ಬಿತ್ತನೆ ಮಾಡಲಾಗಿದ್ದ ರಾಗಿ, ಜೋಳ, ಟೊಮಾಟೊ ಮತ್ತಿತರ ತರಕಾರಿ ಬೆಳೆಗಳು ನಷ್ಟವಾಗಿವೆ. ಇದರಿಂದಾಗಿ ಸಾಲ ಸೂಲ ಮಾಡಿ ಕೃಷಿ ಮಾಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. 

ಧಾರಾಕಾರ ಮಳೆಯಿಂದಾಗಿ ಈ ಭಾಗದಲ್ಲಿ ಕೃಷಿ ಮಾಡಿದ್ದ ನೂರಾರು ಎಕರೆ ಹೊಲಗಳಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತಿದ್ದು, ಹೊಲಗಳೇ ನದಿಗಳಂತೆ ಭಾಸವಾಗುತ್ತಿವೆ. ಬಿತ್ತನೆಬೀಜ, ಬೆಳೆಗಳು ನೀರನಲ್ಲಿ ತೇಲಾಡುತ್ತಿದ್ದು, ಅತಿವೃಷ್ಟಿಯಿಂದಾಗಿ ಈ ಭಾಗದ ರೈತರಿಗೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಕಂದಾಯ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಬೆಳೆ ನಷ್ಟವಾಗಿರುವ ಬಗ್ಗೆ ಪರಿಶೀಲಿಸಿ ಕೂಡಲೇ ಬೆಳೆ ವಿಮೆ, ಪರಿಹಾರ ಒದಗಿಸುವ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News