ಮರೀಚಿಕೆಯಾದ ಪರಿಹಾರ

Update: 2018-06-08 18:38 GMT

ಮಾನ್ಯರೇ,

ಕೆಲವು ಸಮಯದ ಹಿಂದೆ ಸುಪ್ರೀಂಕೋರ್ಟ್ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಗೆ ಒಳಗಾದಂತಹವರಿಗೆ ಹಣಕಾಸಿನ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಡ್ಡಾಯವಾದ ಯೋಜನೆಯನ್ನು ಜಾರಿಗೆ ತರಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಈ ಯೋಜನೆ ಕೂಡಾ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸದೆ ಇರುವುದು ಬೇಸರದ ಸಂಗತಿಯಾಗಿದೆ. ಸುಪ್ರೀಂಕೋರ್ಟಿನ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರ ಪ್ರಕಾರ, 2013ರ ನಂತರ ಸ್ಥಾಪಿಸಲಾದ ನಿರ್ಭಯಾ ನಿಧಿಯಿಂದ ಈವರೆಗೆ 9 ರಾಜ್ಯಗಳ 123 ಅತ್ಯಾಚಾರ ಸಂತ್ರಸ್ತರು ಮಾತ್ರ ಪರಿಹಾರ ಪಡೆದುಕೊಂಡಿದ್ದಾರೆ ಹಾಗೂ ರಾಷ್ಟ್ರೀಯ ಕಾನೂನು ಪ್ರಾಧಿಕಾರದ ಪ್ರಕಾರ ದೇಶದಾದ್ಯಂತ ಶೇ. 5ರಿಂದ 10ರಷ್ಟು ಲೈಂಗಿಕ ಹಿಂಸಾಚಾರ ಬಾಧಿತರು ಮಾತ್ರ ಈ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ!

ಲೈಂಗಿಕ ಹಿಂಸಾಚಾರ ಮತ್ತು ಆ್ಯಸಿಡ್ ದಾಳಿಗಳ ಘಟನೆಗಳು ನಡೆದಾಗ ದೂರಿಗಾಗಿ ಕಾಯದೇ ಕಾನೂನು ಸೇವಾ ಪ್ರಾಧಿಕಾರಗಳೂ ತಾವೇ ಸ್ವಯಂ ಪರಿಗಣನೆಗೆ ತೆಗೆದುಕೊಂಡು ಬಾಧಿತರಿಗೆ ಪರಿಹಾರವನ್ನು ವಿತರಿಸಬಹುದೆಂದೂ ಕೋರ್ಟ್ ಆದೇಶ ಹೊರಡಿಸಿತ್ತು ಹಾಗೂ ಎಲ್ಲಾ ರಾಜ್ಯಗಳಿಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುವಂತೆ ಕನಿಷ್ಠ ರೂ. 5 ಲಕ್ಷದಿಂದ ಗರಿಷ್ಠ 10 ಲಕ್ಷದವರೆಗೆ ಪರಿಹಾರವನ್ನು ನೀಡಬೇಕೆಂದು ಆದೇಶಿಸಲಾಗಿತ್ತು. ಅತ್ಯಾಚಾರ ಮತ್ತು ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂ. ಪರಿಹಾರವಿದ್ದರೆ, ಅಸ್ವಾಭಾವಿಕ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಶೇ. 80 ಶಾಶ್ವತ ವೈಕಲ್ಯಕ್ಕೆ ಗುರಿಯಾದರೆ ರೂ. 5 ಲಕ್ಷ ನಿಗದಿ ಹಾಗೂ ಅತ್ಯಾಚಾರ ನಡೆದ 15 ದಿನದೊಳಗೆ 1 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆದೇಶವಿತ್ತು. ಆದರೆ ಇಂತಹ ಆದೇಶಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ.

2012ರಲ್ಲಿ ದಿಲ್ಲಿಯಲ್ಲಿ ನಿರ್ಭಯಾ ಪ್ರಕರಣ ಸಂಭವಿಸಿದ ನಂತರದಲ್ಲಿ ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಪೈಪೋಟಿಗೆ ಬಿದ್ದವರಂತೆ ಮಹಿಳಾ ಸಂತ್ರಸ್ತರ ಪರಿಹಾರ ಯೋಜನೆಗಳನ್ನು ಘೋಷಿಸಿದ್ದರು. 2015ರಲ್ಲಿ ಅತ್ಯಾಚಾರ, ಆ್ಯಸಿಡ್ ದಾಳಿ ಮತ್ತು ಗುಂಡಿನ ದಾಳಿಗೆ ಬಲಿಯಾದವರಿಗೆಂದೇ 200 ಕೋಟಿ ರೂ. ನಷ್ಟು ಪ್ರಾಥಮಿಕ ನಿಧಿಯುಳ್ಳ ಸಂತ್ರಸ್ತರ ನಿಧಿಯನ್ನು ಸ್ಥಾಪಿಸಲಾಗಿತ್ತು.

ಆದರೆ ನಾಲ್ಸಾ ವರದಿಯ ಪ್ರಕಾರ 2017ರಲ್ಲಿ ಆಂಧ್ರ ಪ್ರದೇಶದಲ್ಲಿ ದಾಖಲಾದ 901 ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಕೇವಲ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ ಮತ್ತು ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 11 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ರಾಜಸ್ಥಾನದಲ್ಲಿ 2017ರಲ್ಲಿ 3,305 ಎಫ್‌ಐಆರ್ ದಾಖಲಾಗಿದ್ದರೂ 140 ಸಂತ್ರಸ್ತರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಬಿಹಾರದಲ್ಲಿ 1,199 ಎಫ್‌ಐಆರ್ ದಾಖಲಾದರೂ ಅದರಲ್ಲಿ 82 ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಇವನ್ನೆಲ್ಲ ನೋಡುವಾಗ ಸರಕಾರಗಳು ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಕೊಡುವಂತಹ ಪರಿಹಾರಗಳು ಕೇವಲ ಕಾಗದಕ್ಕೆ ಸೀಮಿತವಾಗಿವೆಯೇ ವಿನಃ ಅದನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ಖಂಡಿತ ವಿಫಲವಾಗಿವೆ.

Writer - -ರಾಮು ಎಲ್.ಪಿ ಲಕ್ಕವಳ್ಳಿ

contributor

Editor - -ರಾಮು ಎಲ್.ಪಿ ಲಕ್ಕವಳ್ಳಿ

contributor

Similar News