ಚಿಕ್ಕಮಗಳೂರು: ಕಾಡುಕೋಣ ಭೇಟೆಯಾಡಿದ ಹುಲಿ; ಗ್ರಾಮಸ್ಥರಲ್ಲಿ ಆತಂಕ

Update: 2018-06-09 12:14 GMT

ಚಿಕ್ಕಮಗಳೂರು, ಜೂ.9: ಕಾಫಿ ತೋಟಕ್ಕೆ ಹೊಂದಿಕೊಂಡಂತಿರುವ ಅರಣ್ಯದಲ್ಲಿ ಕಾಡುಕೋಣವೊಂದನ್ನು ಕೊಂದಿರುವ ಹುಲಿ ಕಾಡುಕೋಣದ ಅರ್ಧಮದೇಹವನ್ನು ತಿಂದು ಹಾಕಿರುವ ಘಟನೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಘಟನೆಯಿಂದ ಕೆಂಜಿಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಕಾಫಿ ತೋಟಕ್ಕೆ ಹೊಂದಿಕೊಂಡಂತಿರುವ ಅರಣ್ಯದಲ್ಲಿ ಕಾಡುಕೋಣದ ಅರ್ಧ ದೇಹ ಪತ್ತೆಯಾಗಿದ್ದು, ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಮೂಡಿಗೆರೆ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಅರಣ್ಯಾಧಿಕಾರಿಗಳು ಕಾಡುಕೋಣವನ್ನು ಹುಲಿ ಭೇಟೆಯಾಡಿ ಕುತ್ತಿಗೆಯ ಭಾಗವನ್ನು ತಿಂದು ಹಾಕಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಶುಕ್ರವಾರ ರಾತ್ರಿ ಕಾಡುಕೋಣವನ್ನು ಭೇಟೆಯಾಡಿರುವ ಹುಲಿ ನಂತರ ಹೊತ್ತೊಯ್ಯಲಾರದೇ ಸ್ವಲ್ಪಭಾಗ ತಿಂದು ಉಳಿದದ್ದನ್ನು ಹಾಗೆಯೇ ಬಿಟ್ಟು ಹೋಗಿರಬಹುದೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ಕೆಂಜಿಗೆ ಗ್ರಾಮದ ಅರಣ್ಯಕ್ಕೆ ಹೊಂದಿಕೊಂಡಂತೆ ಸಾಕಷ್ಟು ಕಾಫಿ ತೋಟಗಳಿದ್ದು, ಈ ಕಾಫಿ ತೋಟಗಳಲ್ಲೂ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳಿರುವುದನ್ನು ಗ್ರಾಮಸ್ಥರು ಖಚಿತ ಪಡಿಸಿದ್ದಾರೆ. ಇದರಿಂದಾಗಿ ತಾಲೂಕಿನ ಕೆಂಜಿಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನತೆ ತೀವ್ರ ಆತಂಕಕ್ಕೊಳಗಾಗಿದ್ದು, ಜೀವನೋಪಾಯಕ್ಕಾಗಿ ಹಸುಗಳನ್ನು ಸಾಕಿಕೊಂಡಿರುವ ಗ್ರಾಮಸ್ಥರು ಹಸುವಿಗಾಗಿ ಹುಲಿ ಗ್ರಾಮಗಳ ಮೇಲೂ ದಾಳಿ ಮಾಡಬಹುದೆಂಬ ಚಿಂತೆಯಲ್ಲಿದ್ದಾರೆ. ಅಲ್ಲದೇ ಈ ಭಾಗದ ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತಿದ್ದು, ಗ್ರಾಮಗಳಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹುಲಿಯ ತಿರುಗಾಟದ ಭೀತಿಯಿಂದಾಗಿ ಜೀವಭಯದಲ್ಲಿದ್ದಾರೆ. ಈ ಕಾರಣಕ್ಕೆ ಮನೆಯಿಂದ ಹೊರಗೆ ಬರಲು ಸದ್ಯ ಹಿಂದೆ ಮುಂದೆ ನೋಡುವಂತಾಗಿದೆ ಎಂದು ನಿವಾಸಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಕೆಂಜಿಗೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಇದುವರೆಗೂ ಕಾಡಾನೆಗಳ ಭೀತಿಯಿಂದ ಕಾಫಿ, ಅಡಿಕೆ, ಭತ್ತದ ಗದ್ದೆಗಳಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಆದರೀಗ ಹುಲಿಯ ದಾಳಿಯ ಭೀತಿಯಿಂದಾಗಿ ಕಂಗಾಲಾಗಿದ್ದಾರೆ. ಅರಣ್ಯಾಧಿಕಾರಿಗಳೂ ಗ್ರಾಮಸ್ಥರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಬೇಕೆಂದು ಈ ಭಾಗದ ಗ್ರಾಮಗಳ ಮುಖಂಡರು ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News