ಚಿಕ್ಕಮಗಳೂರು: ಮುಂದುವರೆದ ಮಳೆಯ ಅರ್ಭಟ; ಧರೆಗುರುಳಿದ ಮರಗಳು

Update: 2018-06-09 12:20 GMT

ಚಿಕ್ಕಮಗಳೂರು, ಜೂ.9: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಶನಿವಾರವು ಮುಂದುವರಿದಿದ್ದು, ಕಾಫಿನಾಡಿನ ಮಲೆನಾಡು ಭಾಗಗಳಲ್ಲಿ ಹಾಗೂ ಗಿರಿ ಪ್ರದೇಶಗಳಲ್ಲಿ ಮಳೆ ತೀವ್ರಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಮಲೆನಾಡು ಭಾಗವಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಕೊಟ್ಟಿಗೆಹಾರ, ಮೂಡಿಗೆರೆ, ಬಾಳೆಹೊನ್ನೂರು, ಕಳಸ, ಜಯಪುರ, ಕೊಪ್ಪ ಮತ್ತಿತರ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ಜಿಲ್ಲೆಯ ಕೆಲ ಭಾಗದಲ್ಲಿ ಬೃಹತ್ ಮರಗಳು ಧರೆಗೆ ಉರುಳಿ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಗೊಂಡಿದೆ. ಶೃಂಗೇರಿ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಾ, ಭದ್ರಾ ನದಿಯ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಳ್ಳ, ಕೊಳ್ಳ, ಕೆರೆಗಳಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದೆ. ಕೊಪ್ಪ ಸಮೀಪದ ಗುಣವಂತೆ ಗ್ರಾಮದ ಬಳಿ ರಸ್ತೆಗೆ ಮರ ಉರುಳಿದ್ದರಿಂದ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ನಂತರ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮೂಡಿಗೆರೆ ತಾಲೂಕು ಕಳಸ ಹೊಬಳಿಯ ಕಗ್ಗನಳ್ಳ ಪಡೀಲ್ ಗ್ರಾಮದಲ್ಲಿ ವಾಸವಿದ್ದ ಪ್ರಸಾದ್ ಎಂಬವರ ಮನೆಯ ಮೇಲೆ ಶುಕ್ರವಾರ ಮರವೊಂದು ಬಿದ್ದು, ಮನೆಯಲ್ಲಿದ್ದ ಪ್ರಸಾದ್ ಅವರ ಮಗು ಪ್ರಜ್ಞಾರವರ ಎಡಗೈಗೆ ಪೆಟ್ಟಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಇಲ್ಲಿ ಹರಿಯುವ ಭದ್ರಾ ನದಿ ತುಂಬಿ ಹರಿಯುತ್ತಿದೆ. ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದ್ದು, ಸೇತುವೆ ಮುಳಗಲು ಇನ್ನು ಕೆಲವೇ ಅಡಿಗಳು ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ. ಇನ್ನು ಕಳಸ ಸಮೀಪದ ಬಾಳೂರು ಭಾಗದ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. 

ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಜಯಪುರ, ಶೃಂಗೇರಿ ಪಟ್ಟಣ, ನೆಮ್ಮಾರು, ಕಿಗ್ಗ, ಹರಿಹರಪುರ ಮತ್ತಿತರ ಭಾಗಗಳಲ್ಲಿ ಮಳೆಯ ಜೊತೆಗೆ ಗಾಳಿಯ ಆರ್ಭಟವು ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗೆ ತೊಡಕು ಉಂಟಾಗಿದ್ದು, ನಿರಂತರ ಮಳೆಯಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಜಮೀನು ಹಾಗೂ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮನೆ ಬಿಟ್ಟು ಹೊರಬರದಂತಾಗಿದೆ.

ಇನ್ನು ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಪಟ್ಟಣಗಳೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಶನಿವಾರವೂ ಮುಂದುವರೆದಿದೆ. ನಿರಂತರ ಮಳೆಯಿಂದ ತೋಟ ಹೊಲಗಳಲ್ಲಿ ನೀರು ನಿಂತು ನದಿಗಳಂತೆ ಭಾಸವಾಗುತ್ತಿವೇ. ಕಳೆದ ನಾಲ್ಕು ವರ್ಷಗಳಿಂದ ಬರದಿಂದ ಬತ್ತಿ ಹೋಗಿದ್ದ ಹಳ್ಳ ಕೊಳ್ಳಗಳಲ್ಲಿ ನೀರು ನಿಂತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆಯಾಗುತ್ತಿದ್ದು, ಶನಿವಾರ ಸಾಧಾರಣ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಶನಿವಾರ ಬಿರುಸಿನ ಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ಗಿರಿ ಪ್ರದೇಶದಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಜಲ್ಲೆಯಾದ್ಯಂತ ತುಂಗಾ, ಭದ್ರಾ ನದಿ ಸೇರಿದಂತೆ ಸಣ್ಣಪುಟ್ಟ ನದಿಗಳು ತುಂಬಿ ಹರಿಯುತ್ತಿವೆ. ಭದ್ರಾ ಜಲಾಶಯದಲ್ಲಿ ನೀರಿನ ಒಳ ಹರಿವು ತೀವ್ರಗೊಂಡಿದ್ದು, ಫಾಲ್ಸ್ ಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರು ಅತ್ತಕಡೆ ಮುಖ ಮಾಡುತ್ತಿಲ್ಲ. ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ತುಂಬುತ್ತಿದ್ದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News