ಎಂ.ಬಿ.ಪಾಟೀಲ್‌ರನ್ನು ಭೇಟಿಯಾದ ಬಿಜೆಪಿ ಶಾಸಕ ಶಿವರಾಜ್‌ ಪಾಟೀಲ್

Update: 2018-06-10 12:25 GMT

ಬೆಂಗಳೂರು, ಜೂ.10: ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್‌ರನ್ನು ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್‌ ಪಾಟೀಲ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರವಿವಾರ ಸದಾಶಿವನಗರದಲ್ಲಿರುವ ಎಂ.ಬಿ.ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್‌ ಪಾಟೀಲ್, ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ಎಂ.ಬಿ.ಪಾಟೀಲ್‌ಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ ಪಾಟೀಲ್, ಎಂ.ಬಿ.ಪಾಟೀಲ್ ಹಾಗೂ ನಮ್ಮದು ಹಳೆಯ ಸಂಬಂಧ. ಚುನಾವಣೆಯಲ್ಲಿ ಗೆದ್ದ ಬಳಿಕ ಅವರನ್ನು ಭೇಟಿಯಾಗಿರಲಿಲ್ಲ. ಹಾಗಾಗಿ, ಇವತ್ತು ಭೇಟಿ ಮಾಡಿದ್ದೇನೆ. ಈ ವೇಳೆ ಯಾವುದೇ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಿಲ್ಲ ಎಂದರು.

ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ.ಪಾಟೀಲ್ ನಮ್ಮ ಭಾಗದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇದೊಂದು ಸೌಜನ್ಯದ ಭೇಟಿಯಷ್ಟೇ. ಇದು ರಾಜಕೀಯ ಭೇಟಿಯಲ್ಲ, ಬಿಜೆಪಿಗೆ ಸೇರುವಂತೆ ಅವರಿಗೆ ಆಹ್ವಾನ ನೀಡಲು ಬಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ನನಗೂ ಯಾವುದೆ ಸಂಬಂಧವಿಲ್ಲ ಎಂದು ಅವರು ಹೇಳಿದರು.

ಎಂ.ಬಿ.ಪಾಟೀಲ್ ಮನವೊಲಿಕೆಗೆ ಏನಾದರೂ ಇಲ್ಲಿಗೆ ಬಂದಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರ ಮನವೊಲಿಸಲು ನಾನು ಬಂದಿಲ್ಲ. ರಾಯಕೀಯ ವಿಚಾರಗಳನ್ನು ಚರ್ಚೆ ಮಾಡುವಷ್ಟು ದೊಡ್ಡವನು ನಾನಲ್ಲ. ಆ ವಿಚಾರಗಳನ್ನು ನಮ್ಮ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ನನ್ನ ಹಾಗೂ ಎಂ.ಬಿ.ಪಾಟೀಲ್ ಸಂಬಂಧ ಪಕ್ಷಕ್ಕೂ ಮೀರಿದ್ದು ಎಂದು ಶಿವರಾಜ್‌ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News