ಟ್ರಾಕ್ಟರ್ ಟ್ರಾಲಿ ಮಗುಚಿ ನಾಲ್ವರು ಕೂಲಿ ಕಾರ್ಮಿಕರು ಮೃತ್ಯು

Update: 2018-06-10 13:15 GMT

ರಾಯಚೂರು, ಜೂ. 10: ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಎಂಜಿನ್‌ನ ಕೊಂಡಿ ಕಳಚಿದ ಪರಿಣಾಮ ಟ್ರಾಕ್ಟರ್ ಟ್ರಾಲಿ ಮಗುಚಿ ವಿದ್ಯುತ್ ಕಂಬಗಳು ಮೇಲೆ ಬಿದ್ದ ಪರಿಣಾಮ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಳೇಕಲ್ ಗ್ರಾಮದ ಕೂಲಿ ಕಾರ್ಮಿಕರಾದ ನಾಗರಾಜ್, ಶರಣಪ್ಪ, ರಮೇಶ್, ಮಲ್ಲಿಕಾರ್ಜುನ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಳೇಕಲ್ ಗ್ರಾಮದಿಂದ ಸಿಂಧನೂರಿಗೆ ವಿದ್ಯುತ್ ಕಂಬಗಳನ್ನು ಟ್ರಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಪಟ್ಟಣದ ಶ್ರೀಪುರಂ ಜಂಕ್ಷನ್‌ನಲ್ಲಿ ಟ್ರಾಕ್ಟರ್ ತಿರುವಿನಲ್ಲಿ ಎಂಜಿನ್ ಕೊಂಡಿ ಕಳಚಿ ಟ್ರಾಲಿ ಮಗುಚಿದೆ. ಇದರಿಂದ ಟ್ರಾಕ್ಟರ್‌ನಲ್ಲಿದ್ದ ವಿದ್ಯುತ್ ಕಂಬಗಳು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತರ ಸಂಬಂಧಿಕರ ರೋಧನ ಮುಗಿಲುಮುಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಸಿಂಧನೂರು ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಸಿಂಧನೂರು ಪಟ್ಟಣ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News