"ಪ್ರತ್ಯೇಕ ಲಿಂಗಾಯತ ಧರ್ಮದ ಮನವಿಯನ್ನು ಕೇಂದ್ರ ಸರ್ಕಾರ ವಾಪಾಸ್ ಕಳಿಸಿದ್ದು ಒಳ್ಳೆಯದೇ ಆಗಿದೆ"

Update: 2018-06-10 15:08 GMT

ದಾವಣಗೆರೆ,ಜೂ.10: ಪ್ರತ್ಯೇಕ ಲಿಂಗಾಯತ ಧರ್ಮದ ಮನವಿಯನ್ನು ಕೇಂದ್ರ ಸರ್ಕಾರ ವಾಪಾಸ್ಸು ಕಳಿಸಿದ್ದು ಒಳ್ಳೆಯದೇ ಆಗಿದೆ. ವೀರಶೈವ ಲಿಂಗಾಯತ ಒಟ್ಟಾಗಿಯೇ ಹೋದರೆ ಒಳ್ಳೆಯದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.  

ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಒಂದಾಗುವುದಿದ್ದರೆ ಆಗಲಿ. ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ, ಸಹಕಾರವಿದೆ. ಎಲ್ಲರೂ ಒಟ್ಟಾಗಿ ಹೋಗುವುದೂ ಒಳ್ಳೆಯದು. ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಒಂದಾಗುವುದಿದ್ದರೆ ಕುಳಿತು ಚರ್ಚಿಸೋಣ. ಮುಂದಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡೋಣ ಎಂದು ಅವರು ಹೇಳಿದರು. 

ನಾವು ಒಪ್ಪಿಕೊಂಡು ಬರುವುದು, ಅವ್ರು ಒಪ್ಪಿಕೊಂಡು ಬರುವುದಲ್ಲ. ಒಂದಾಗಿ ಹೋದರೆ ಇಬ್ಬರಿಗೂ ಒಳ್ಳೆಯದು. ಇಲ್ಲದಿದ್ದರೆ ಇಲ್ಲ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕೇಂದ್ರದ ಕ್ರಮವನ್ನು ಯಾರದ್ದೋ ಗೆಲುವು, ಸೋಲು ಎಂಬುದಾಗಿ ನಾವು ಹೇಳುವುದಲ್ಲ. ನಾವೆಲ್ಲರೂ ಒಗ್ಗೂಡಿ ಹೋಗಲು ತಯಾರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಧರ್ಮದ ಮನವಿಯನ್ನು ಕೇಂದ್ರವು ವಾಪಾಸ್ಸು ಕಳಿಸಿದ ಬಗ್ಗೆ ತನಗೆ ಮಾಹಿತಿ ಇಲ್ಲ. ತಾನು ಈ ವಿಚಾರದ ಬಗ್ಗೆ ನೋಡಿಲ್ಲ. ಈ ಬಗ್ಗೆ ವಿಚಾರಿಸುವೆ. ಒಂದು ವೇಳೆ ಪ್ರತ್ಯೇಕ ಧರ್ಮದ ಮನವಿ ವಾಪಾಸ್ಸು ಕಳಿಸಿದ್ದರೆ ಅದು ಒಳ್ಳೆಯದೇ ಆಗಿದೆ. ವೀರಶೈವ ಲಿಂಗಾಯತ ಒಟ್ಟಾಗಿ ಹೋಗಬೇಕೆಂಬುದು ನಮ್ಮ ಉದ್ದೇಶವೂ ಆಗಿದೆ ಎಂದು ಅವರು ತಿಳಿಸಿದರು

ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಮಾತುಕತೆಗೆ ಸಿದ್ಧರಿದ್ದರೆ ಒಂದಾಗಿ ಹೋಗುವ ಕುರಿತಂತೆ ಕುಳಿತು ಚರ್ಚಿಸೋಣ. ಕಂಡೀಷನ್ ಹಾಕಿದರೆ ಅವ್ರು ಮನೆಯಲ್ಲಿ ಅವ್ರು, ನಮ್ಮನೇಲಿ ನಾವು ಇರುತ್ತೇವೆ. ವೀರಶೈವ ಲಿಂಗಾಯತ ಸಮಾಜವೆಂಬುದು ಯಾರೊಬ್ಬರ ಮನೆಯ ಆಸ್ತಿಯಲ್ಲ. ಇದು ಇಡೀ ಸಮಾಜದ ಆಸ್ತಿ ಎಂದು ಅವರು ತಿಳಿಸಿದರು. 

ಜಾಮದಾರ್ ಅಧಿಕಾರದಲ್ಲಿದ್ದಾಗ ಎಷ್ಟು ಜನರಿಗೆ ಒಳ್ಳೆಯದು ಮಾಡಿದ್ದಾರೆ? ಅಧಿಕಾರಿಯಾಗಿದ್ದಾಗ ಯಾರಿಗೂ ಒಳ್ಳೆಯದು ಮಾಡಿದ್ದಾರೆ. ಕೇಳಿಕೊಂಡು ಬರಲಿ. ಅಧಿಕಾರವಿದ್ದಾಗ ಯಾರಿಗೂ ಸಹಾಯ ಮಾಡದ ವ್ಯಕ್ತಿ ಈಗ ಮಾತನಾಡುತ್ತಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹರಿಹಾಯ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News