ಆರ್‌ಟಿಇ ಕಾಯ್ದೆ ಜಾರಿಯಾದ 8 ವರ್ಷದಲ್ಲೇ 40,000 ಪ್ರಕರಣ ದಾಖಲು: ವಿಶ್ವಬ್ಯಾಂಕ್ ವರದಿ

Update: 2018-06-10 15:36 GMT

ಹೊಸದಿಲ್ಲಿ, ಜೂ.10: ಭಾರತದಲ್ಲಿ ಶಿಕ್ಷಣದ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ಬಂದ ಎಂಟು ವರ್ಷಗಳ ಅವಧಿಯಲ್ಲೇ ಸುಮಾರು 40,000ದಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ದೇಶದಲ್ಲಿ ಬಹಳಷ್ಟು ಜನರು ಇನ್ನೂ ಈ ಚಾರಿತ್ರಿಕ ಕಾಯ್ದೆಯ ಅನುಕೂಲದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ.

2010ರ ಬಳಿಕ ಭಾರತದಲ್ಲಿ ಆರ್‌ಟಿಇ ಕಾಯ್ದೆಯಡಿ ಸುಮಾರು 40,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವಬ್ಯಾಂಕ್‌ನ ಕಾರ್ಯನೀತಿ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಶೇ.25 ಮೀಸಲಾತಿ ಖಚಿತಪಡಿಸಿರುವ ಅಂಶದ ಉಲ್ಲಂಘನೆಯ ಕುರಿತು ಬಹುತೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಶಿಕ್ಷಕರ ಅರ್ಹತೆ, ಪ್ರಮಾಣ, ಮಾನ್ಯತೆ ಇತ್ಯಾದಿಗಳ ಕುರಿತು ಖಾಸಗಿ ಶಾಲೆಗಳು ಸಲ್ಲಿಸಿದ ಅರ್ಜಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ .2010ರ ಬಳಿಕ ಸಲ್ಲಿಸಲಾದ ಒಟ್ಟು 41,343 ಪ್ರಕರಣಗಳಲ್ಲಿ 2,477 ಪ್ರಕರಣಗಳು ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ದಿಲ್ಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯವಾದಿಗಳು ಈ ಕಾನೂನಿನಡಿ ಮಕ್ಕಳಿಗೆ ನೀಡಲಾಗಿರುವ ಹಕ್ಕನ್ನು ಒದಗಿಸುವಂತೆ ಕೋರಿ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳನ್ನು ದಾಖಲಿಸಿದ್ದಾರೆ.

 ಸಾರ್ವಜನಿಕ ಚರ್ಚೆ ಹಾಗೂ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ವಿಶ್ವಬ್ಯಾಂಕ್, ಆರ್‌ಟಿಇ ಕಾಯ್ದೆ ಸಮರ್ಪಕವಾಗಿ ಅನುಷ್ಟಾನಗೊಳ್ಳದಿರುವ ಕಾರಣಗಳನ್ನು ವಿವರಿಸಿದೆ. ಉದಾಹರಣೆಗೆ, ಇಂತಿಷ್ಟು ಸೀಟುಗಳನ್ನು ಮೀಸಲಿರಿಸಬೇಕೆಂಬ ಷರತ್ತು ವಿಧಿಸಿದಾಕ್ಷಣ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆಗದು. ಮೀಸಲು ಸೀಟುಗಳಿಗೆ ರಾಜ್ಯ ಸರಕಾರ ಒದಗಿಸುವ ಸಬ್ಸಿಡಿ ಆ ಶಾಲೆ ನಿಗದಿಗೊಳಿಸಿರುವ ಬೋಧನಾ ಶುಲ್ಕಕ್ಕಿಂತ ಅತ್ಯಂತ ಕಡಿಮೆಯಾಗಿದೆ. ಸಮವಸ್ತ್ರ, ಪುಸ್ತಕ ಹಾಗೂ ಇತರ ಚಟುವಟಿಕೆಗಳ ಶುಲ್ಕವನ್ನು ಯಾರು ಪಾವತಿಸಬೇಕೆಂದು ಕಾಯ್ದೆಯಲ್ಲಿ ತಿಳಿಸಲಾಗಿಲ್ಲ. ಅಲ್ಲದೆ ಮೀಸಲಾತಿಗೆ ವಿರೋಧ ಸೂಚಿಸುವ ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳು ಬಡವರ್ಗದ ಮಕ್ಕಳೊಂದಿಗೆ ಬೆರೆಯಲು ಬಯಸುವುದಿಲ್ಲ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆರ್‌ಟಿಇ ಕಾಯ್ದೆಯ ಪ್ರಕಾರ ಪ್ರಾಥಮಿಕ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಹಾಗೂ ವಂಚಿತ ಸಮುದಾಯದ ಮಕ್ಕಳಿಗೆ ಖಾಸಗಿಶಾಲೆಗಳಲ್ಲಿ ಶೇ.25ರಷ್ಟು ಸ್ಥಾನಗಳನ್ನು ಮೀಸಲಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News