ಕೊಳ್ಳೇಗಾಲ: ಸಚಿವ ಎನ್.ಮಹೇಶ್‍ಗೆ ಸನ್ಮಾನ ಕಾರ್ಯಕ್ರಮ

Update: 2018-06-10 17:04 GMT

ಕೊಳ್ಳೇಗಾಲ,ಜೂ.10: ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಎನ್.ಮಹೇಶ್‍ರವರಿಗೆ ಇಲ್ಲಿನ ಭ್ರಮಾರಂಭ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅಭಿಮಾನಿ ಬಳಗ, ಬಿಎಸ್‍ಪಿ ಕಾರ್ಯಕರ್ತರು ಹಾಗೂ ಜೆ.ಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಅಭಿನಂದನೆ ಸಲ್ಲಿಸಿದರು.

ಸನ್ಮಾನ ಹಾಗೂ ಅಭಿನಂದನೆ ನಂತರ ಮಾತಾನಾಡಿದ ಸಚಿವ ಮಹೇಶ್ ರವರು 'ಈ ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಕೆಲಸ ಮಾಡುತ್ತೇನೆ. ಶಿಕ್ಷಣ ಇಲಾಖೆ ಬೃಹತ್ ಇಲಾಖೆ. 5 ಲಕ್ಷ ಶಿಕ್ಷಕರು ಹಾಗೂ 2.5 ಕೋಟಿ ವಿದ್ಯಾರ್ಥಿಗಳಿದ್ದು, ಶಿಕ್ಷಕರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸುಧಾರಣೆ ಮಾರ್ಗ ಕಂಡು ಹಿಡಿಯಬೇಕಾಗಿದೆ. ನಾಳೆ ಈ ಸಂಬಂಧ ಉನ್ನತ ಅಧಿಕಾರಿಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆದಿದ್ದೇನೆ ಎಂದರು.

ನಾನು ಶಂಕನಪುರದ ಒಬ್ಬ ಜೀತಗಾರನ ಮಗನಾಗಿ ಹುಟ್ಟಿ ಇಂದು ಸಚಿವ ಸ್ಥಾನ ಪಡೆಯಲು ಡಾ.ಅಂಬೇಡ್ಕರ್ ಸಾಹೇಬ್‍ರ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದೇ ಕಾರಣ ಎಂದರು. ಕೊಳ್ಳೇಗಾಲ ಕ್ಷೇತ್ರದ ಎಲ್ಲ ಸಮುದಾಯದವರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಇವರ ಋಣ ತೀರಿಸಲು ನುಡಿದಂತೆ ನಡೆಯುವುದಾಗಿ ಮಹೇಶ್ ತಿಳಿಸಿದರು.

ಕೇಳಿದ್ದು ಸಣ್ಣ ನೀರಾವರಿ ಕೊಟ್ಟಿದ್ದು ಶಿಕ್ಷಣ ಇಲಾಖೆ
ನಾನು ಕುಮಾರಸ್ವಾಮಿಯವರಲ್ಲಿ ನನಗೆ ಸಣ್ಣ ನೀರಾವರಿ ಖಾತೆ ಕೊಡಿಸಿ, ನಮ್ಮ ಕಡೆ ಹೆಚ್ಚು ಕೆರೆಗಳಿವೆ, ಎಲ್ಲಾ ಕೆರೆಗೂ ನೀರು ತುಂಬಿಸಿ ರೈತರಿಗೆ ಅನುಕೂಲಕರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ನನ್ನ ಮೇಲೆ ಭರವಸೆ ಇಟ್ಟು ಉತ್ತಮ ಖಾತೆಯನ್ನು ನೀಡಿದ್ದಾರೆ. ಮಾಯವತಿಯವರು ಶಿಫಾರಸ್ಸು ಮಾಡಿದ್ದರಿಂದ ಈ ಖಾತೆ ನನಗೆ ಧಕ್ಕಿದೆ ಎಂದು ಸಭೆಗೆ ತಿಳಿಸಿದರು.

ಅಡ್ಡ ಬಿದ್ದು ಮತದಾರರಿಗೆ ಕೃತಜ್ಞತೆ 
ಅಭಿನಂದನೆ ಹಾಗೂ ಸನ್ಮಾನ ಸೀಕರಿಸಿದ ನಂತರ, 'ನೀವು ನನಗೆ ಅಭಿನಂದಿಸುವುದು ಸರಿಯಲ್ಲ. ನಾನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಬೇಕು. ಈ ಕಾರಣಕ್ಕಾಗಿ ನಿಮ್ಮ ಮುಂದೆ ಅಡ್ಡಬಿದ್ದು, ನನ್ನ ಕೃತಜ್ಞತೆ ತಿಳಿಸುತ್ತೇನೆ ಎಂದು ಸಭಾಂಗಣದಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿ ಮತದಾರರಿಗೆ ಮಂಡಿವೂರಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. 

ಅಭಿನಂದನೆ ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಬಾಗಲಿರೇವಣ್ಣ, ಯಳಂದೂರು ತಾ.ಪಂ ಸದಸ್ಯ ನಾಗರಾಜು, ಗಣಿಉದ್ಯಮಿ ವೀರಮಾದು, ತಾ.ಪಂ ಮಾಜಿ ಸದಸ್ಯರಾದ ತಿಮ್ಮರಾಜೀಪುರ ಪುಟ್ಟಣ್ಣ, ಹಂಪಾಪುರ ಬಸವಣ್ಣ, ಮುಖಂಡರಾದ ಆಟೋಶಿವು, ಉದಯ್‍ ಕುಮಾರ್, ಸೋಮಣ್ಣ ಉಪ್ಪಾರ್, ರಾಮಕೃಷ್ಣ, ರಂಗಸ್ವಾಮಿ, ಸಿದ್ದರಾಜು, ಗುಂಡಪ್ಪ, ಜೆಡಿಎಸ್ ಮುಖಂಡರಾದ ಕಾಮರಾಜು, ಚಾಮರಾಜು, ಜಿಂದ್ರೇಶ್, ಕೃಷ್ಣಯ್ಯ, ಫಾಯಿಕ್, ಸಮೀಷರೀಫ್, ಇನಾಯತ್, ಆನಂದ್, ಅಗಸ್ಟಿನ್, ಜಯಂತ್ ಹಾಗೂ ಸಾವಿರಾರು ಮಂದಿ ನೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News