ಮರೆತ ದಾರಿಗಳ ಅಧ್ಯಯನ

Update: 2018-06-11 18:33 GMT

 ‘‘ಅಚಲ ಗುರು ಮಾರ್ಗ’’ ಹೆಸರೇ ಹೇಳುವಂತೆ ಇದು ಮರೆತ ದಾರಿಗಳ ಅಧ್ಯಯನ. ಈ ನೆಲದ ತಳಸ್ತರದ ಜನರ ಸಂಸ್ಕೃತಿ ಮತ್ತು ಅಧ್ಯಾತ್ಮದ ನೆಲೆಗಳನ್ನು ಶೋಧಿಸುವ ಕೆಲಸವನ್ನು ಈ ಕೃತಿಯ ಮೂಲಕ ಪದ್ಮಾಲಯ ನಾಗರಾಜ್ ಮಾಡಿದ್ದಾರೆ. ಈವರೆಗೆ ಹೆಚ್ಚು ಚರ್ಚೆಯಾಗಿರದ, ಅಚಲ ಪರಂಪರೆಯ ಕುರಿತಂತೆ ಬೆಳಕು ಚೆಲ್ಲುವ ಕೃತಿ ಇದು. ಕನ್ನಡ ಮತ್ತು ತೆಲುಗು ಭಾಷೆಗಳನ್ನು ಬೇರೆ ಬೇರೆ ಭಾಷೆಗಳೆಂದು ಕೊಳ್ಳದೆ ಅವು ಒಂದೇ ಭಾಷೆಯೆಂದು ಬದುಕುವ ವಿಸ್ತಾರವಾದ ಸಂಧಿ ಭೂಮಿಯೆನ್ನಬಹುದಾದ ಅವಿಭಜಿತ ಕೋಲಾರ, ತುಮಕೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ರಾಯದುರ್ಗ, ಅನಂತಪುರ, ರಾಯಲಸೀಮಾ ಪ್ರಾಂತ ದಲ್ಲಿ ಅಚಲಿಗರೆಂದು ಕರೆದುಕೊಳ್ಳುವ ಸಾಧಕ ಪರಂಪರೆಯಿದೆ. ಮನಸ್ಸಿನ ಮೂಲೆಯಲ್ಲಿ ಕೂಡ ಲೋಕಕ್ಕೆ ಮುಚ್ಚಿಟ್ಟು ಬಾಳುವುದು ಏನೂ ಇರಕೂಡದು ಎಂದು ನಂಬಿ ಬದುಕುವ ಅವರು ತಮ್ನನ್ನು ತಾವು ಬಹಿರಂಗಿಗಳು ಎಂದು ಕರೆದುಕೊಳ್ಳುತ್ತಾರೆ. ಈ ಮಾರ್ಗದ ಸಾಧಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ರಾಮಾವಧೂತರು, ದಕ್ಷಿಣಾಮೂರ್ತಿ, ಗಟ್ಟಿ ಹಳ್ಳಿ ಅಂಜನಪ್ಪ, ಗಗನಾನಂದಾರ್ಯರು, ನಾಗಾರ್ಯರು, ಪೋಲಾರ್ಯರು, ವೀರದಾಸಮ್ಮ, ಬೇರಿಕೆ ಬುಟ್ಟಪ್ಪನವರು ಮುಂತಾದ ಸಾಧಕರು ಈ ಅಚಲ ಮಾರ್ಗದಲ್ಲಿ ಆಗಿ ಹೋಗಿದ್ದಾರೆ. ಆಂಧ್ರದ ನಾಗಾರ್ಜುನ ಕೊಂಡ, ಶ್ರೀಶೈಲಗಳಿಂದ ಕವಲೊಡೆದ ಈ ಮಾರ್ಗದ ತಾತ್ವಿಕ ಆಕರಮೂಲವೆಂದರೆ ನಾಗಾರ್ಜುನನ ದಶಭೂಮಿಕಾಶಾಸ್ತ್ರ. ಲೋಕವನ್ನು ನಾವು ಗ್ರಹಿಸಬೇಕಾದ ಕ್ರಮ ಮತ್ತುಸಾಧನೆಯ ವಿವಿಧ ಹಂತಗಳನ್ನು ಹತ್ತು ಹಲವು ಹಂತಗಳಲ್ಲಿ ಬೌದ್ಧಧರ್ಮದ ಈ ದಶಭೂಮಿಕಾಶಾಸ್ತ್ರವು ವಿವರಿಸುತ್ತದೆ.

ಬೌದ್ಧ ಮಧ್ಯಮಮಾರ್ಗಿಗಳಾಗಿರುವ ಅಚಲಿಗರು ಕರ್ನಾಟಕದಲ್ಲಿ ಹೇಗೆ ನೆಲೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲಕಾರಿ ವಿವರಗಳನ್ನು ಈ ಕೃತಿ ನೀಡುತ್ತದೆ. ಈ ನೆಲದ ಸಂಸ್ಕೃತಿ ನೆಲೆಯಲ್ಲಿ ಅನಿವಾರ್ಯವಾಗಿ ಆಗಲೇ ಬೇಕಿರುವ ಪಲ್ಲಟಗಳನ್ನು ಗುರುತಿಸುವುದರೊಂದಿಗೆ, ಆ ಪಲ್ಲಟಗಳ ಸ್ವರೂಪವನ್ನು, ಅದರ ಹಿಂದಿನ ತಾತ್ವಿಕ ವಿನ್ಯಾಸವನ್ನು ಸಿದ್ಧಪಡಿಸಿಕೊಡುತ್ತಿರುವುದರಿಂದಲೇ ಇದು ಮಹತ್ವದ ಹಾಗೂ ಅನನ್ಯ ಕೃತಿಯೆಂದು ಬೆನ್ನುಡಿಯಲ್ಲಿ ಲಕ್ಷೀಪತಿ ಕೋಲಾರ ಅವರು ಅಭಿಪ್ರಾಯಪಡುತ್ತಾರೆ. ಅಚಲ ಮಾರ್ಗ ಏನು ಎನ್ನುವುದರ ವಿವರಗಳನ್ನು ತಿಳಿಸಿಕೊಡುವುದಲ್ಲದೆ, ಆ ಚಿಂತನ ಸಾರವನ್ನು ಕೃತಿ ಹೇಳುತ್ತದೆ. ಜೊತೆಗೆ ಆ ಮಾರ್ಗದಲ್ಲಿ ಸಾಗಿದವರ ಬದುಕನ್ನು ತೆರೆದಿಡುವ ಪ್ರಯತ್ನವನ್ನೂ ಮಾಡುತ್ತದೆ. ಕನ್ನಡದ ನೆಲದಲ್ಲಿ ತಾತ್ವಿಕ ನೆಲೆಗಳ ಮೂಲಗಳನ್ನು ಅರಸುವ ಇದರ ಉದ್ದೇಶ ನಮ್ಮನ್ನು ಬುದ್ಧನ ಕಾಲದವರೆಗೂ ಕೊಂಡೊಯ್ಯುತ್ತದೆ. ಬೇರೆ ಬೇರೆ ಭಾಷೆ, ಸಂಸ್ಕೃತಿಗಳು ಹೇಗೆ ಜೊತೆಗೂಡಿ ಒಂದು ಆಧ್ಯಾತ್ಮಿಕ ಅನನ್ಯತೆಯನ್ನು ಈ ನೆಲದಲ್ಲಿ ಕಟ್ಟಿಕೊಟ್ಟಿದೆ ಎನ್ನುವುದನ್ನು ಈ ಕೃತಿಯ ಮೂಲಕ ತಿಳಿದುಕೊಳ್ಳಬಹುದು.
ಆದಿಮ ಪ್ರಕಾಶನ ಕೋಲಾರ ಅವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 190. ಮುಖಬೆಲೆ 200 ರೂಪಾಯಿ. ಆಸಕ್ತರು 97400 60354 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News