ಮಾದಕ ವಸ್ತು ಉತ್ಪಾದನೆ-ಮಾರಾಟ: ಅಂತರಾಷ್ಟ್ರೀಯ ಜಾಲ ಪತ್ತೆ

Update: 2018-06-14 17:27 GMT

ಪಣಜಿ, ಜೂ.14: ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧೆಡೆ ದಾಳಿ ನಡೆಸಿರುವ ಆದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ಕೆಟಮಿನ್ ಎಂಬ ಮಾದಕ ವಸ್ತು ಉತ್ಪಾದಿಸಿ ಮಾರಾಟ ಮಾಡುವ ಅಂತರಾಷ್ಟ್ರೀಯ ಜಾಲವೊಂದನ್ನು ಬೇಧಿಸಿ ಬೃಹತ್ ಪ್ರಮಾಣದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಬ್ರಿಟಿಷರು, ಓರ್ವ ವಿಯೆಟ್ನಾಮಿ ನಾಗರಿಕ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಹವಾಲಾ ವ್ಯವಸ್ಥೆಯಡಿ ಈ ಅಂತರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಮೂರು ದಿನಗಳಿಂದ ಗೋವಾ, ವಡೋದರ (ಗುಜರಾತ್) ಹಾಗೂ ರಾಯ್‌ಗಢ(ಮಹಾರಾಷ್ಟ್ರ)ದ 14 ವಸತಿಗೃಹ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ದಾಳಿ ನಡೆಸಿ 308 ಕಿ.ಗ್ರಾಂ. ಪ್ರಮಾಣದ ಕೆಟಮಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಪರೇಷನ್ ವಿಟಮಿನ್ ಎಂಬ ಸಂಕೇತ ಪದದ ಕಾರ್ಯಾಚರಣೆಯಲ್ಲಿ 2,000 ಕಿ.ಗ್ರಾಂ.ನಷ್ಟು ಕಚ್ಛಾ ವಸ್ತುವನ್ನೂ ವಶಕ್ಕೆ ಪಡೆಯಲಾಗಿದೆ. ಈ ಕಚ್ಛಾವಸ್ತುವಿನಿಂದ 250 ಕಿ.ಗ್ರಾಂನಷ್ಟು ಕೆಟಮಿನ್ ತಯಾರಿಸಬಹುದಾಗಿದೆ. ನಾಲ್ಕು ಅಕ್ರಮ ಕೆಟಮಿನ್ ಉತ್ಪಾದನಾ ಘಟಕಗಳು ಹಾಗೂ ಪ್ರಯೋಗಾಲಯಗಳನ್ನು ನಾಶಗೊಳಿಸಲಾಗಿದೆ. ಈ ಹಿಂದೆ 2009 ಮತ್ತು 2012ರಲ್ಲಿ ಮಾದಕ ವಸ್ತು ಮಾರಾಟ ನಿಷೇಧ ಕಾಯ್ದೆಯಡಿ ಬಂಧಿತನಾಗಿದ್ದ ವಿದೇಶಿ ಪ್ರಜೆಯೊಬ್ಬ ಈ ಜಾಲದ ರೂವಾರಿಯಾಗಿದ್ದ.

ರಾಸಾಯನಿಕ ಕೈಗಾರಿಕೆ ಎಂಬ ಹೆಸರಿನಲ್ಲಿ ಈತ ರಾಯ್‌ಗಢ(ಮಹಾರಾಷ್ಟ್ರ)ದ ಪನ್ವೇಲ್‌ನ ರಸೈನಿ ಎಂಬಲ್ಲಿ ಕೈಗಾರಿಯೊಂದನ್ನು ಸ್ಥಾಪಿಸಿ ಮಾದಕ ವಸ್ತುಗಳನ್ನು ಉತ್ಪಾದಿಸುತ್ತಿದ್ದ. ಅಂತರಾಷ್ಟ್ರೀಯ ಮಾದಕ ವಸ್ತು ವ್ಯವಹಾರ ಸಂಘಟನೆಯು ಈ ಜಾಲವನ್ನು ನಿಯಂತ್ರಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘ನಾರ್ಕೊಟಿಕ್ಸ್ ಡ್ರಗ್ಸ್ ಆ್ಯಂಡ್ ಸೈಕೊಟ್ರೊಫಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್)’ ಕಾಯ್ದೆಯಡಿ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಜಾಲದ ಪ್ರಮುಖ ಸಂಯೋಜಕರು, ಬಂಡವಾಳ ಹೂಡಿರುವವರು, ಮಾರಾಟ ಮಾಡಿದವರು ಮತ್ತು ಖರೀದಿ ಮಾಡಿದವರು ಸೇರಿದ್ದಾರೆ. ಬಂಧಿತ ಮೂವರು ವಿದೇಶಿ ಪ್ರಜೆಗಳಿಗೆ ಪೂರ್ವ ಏಶ್ಯಾ ಮತ್ತು ಕೆನಡಾದಲ್ಲಿರುವ ಅಂತರಾಷ್ಟ್ರೀಯ ಮಾದಕವಸ್ತು ಮಾರಾಟ ಜಾಲದೊಡನೆ ಸಂಪರ್ಕವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಅರಿವಳಿಕೆ ಮದ್ದಿನಲ್ಲಿ ಕೆಟಮಿನ್ ಬಳಸಲಾಗುತ್ತದೆ. ಇದನ್ನು ಬಳಸಿದರೆ ಗಾಳಿಯಲ್ಲಿ ತೇಲಾಡುವಂತಹ ಭಾವನೆ ಉಂಟಾಗಿ ಮೈಮನ ಹಗುರವಾಗುತ್ತದೆ ಎನ್ನಲಾಗಿದ್ದು ಮಾದಕ ವಸ್ತು ಸೇವನೆಯ ಚಟವುಳ್ಳವರಿಗೆ ಅಚ್ಚು ಮೆಚ್ಚಾಗಿದೆ.

ಕೊರಿಯರ್ ಮೂಲಕ ಸರಬರಾಜು ಶ್ರೀಲಂಕಾ, ಮೊಝಾಂಬಿಕ್ , ಯುನೈಟೆಡ್ ಕಿಂಗ್‌ಡಮ್, ಕೆನಡ, ಮಲೇಶ್ಯ, ನೇಪಾಳ, ಆಸ್ಟ್ರೇಲಿಯ. ವಿಯೆಟ್ನಾಮ್ ಹಾಗೂ ಕೀನ್ಯಾ ದೇಶಗಳ ಮಾದಕವಸ್ತು ಮಾರಾಟಗಾರರಿಗೆ ಭಾರತದಿಂದ ಕೊರಿಯರ್ ಅಥವಾ ಅಂಚೆ ಸೇವೆಯ ಮೂಲಕ ಸರಬರಾಜು ಆಗುತ್ತಿತ್ತು. ಭಾರತ ಮತ್ತು ವಿದೇಶದಲ್ಲಿ ಸುವ್ಯವಸ್ಥಿತ ಮಾರಾಟ ಜಾಲವನ್ನು ಇವರು ಹೊಂದಿದ್ದರು. ಕಚ್ಛಾ ವಸ್ತುಗಳಿಗೆ ಹಣ ಪಾವತಿ ಹಾಗೂ ಮಾದಕ ವಸ್ತುಗಳ ಮಾರಾಟ ಮಾಡಿರುವ ಹಣ ಸ್ವೀಕೃತಿ ಹವಾಲಾ ಜಾಲದ ಮೂಲಕ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News