ಕಗ್ಗನಳ್ಳ: ನನಸಾಗದ ಸೇತುವೆ ಕನಸು

Update: 2018-06-16 17:34 GMT

►ಸೇತುವೆ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು 
►ತೆಪ್ಪದ ಮೂಲಕ ನದಿ ದಾಟಿಸಲು ನಾವಿಕನಿಲ್ಲ

ಕಳಸ, ಜೂ.16: ಇಲ್ಲಿಗೆ ಸಮೀಪದ ಕಗ್ಗನಳ್ಳ ಗ್ರಾಮದಲ್ಲಿ ಹರಿಯುವ ಭದ್ರಾ ನದಿಗೆ ಸೇತುವೆ ಬೇಕೆಂದ ಈ ಭಾಗದ ಜನರ ಕೂಗು 20 ವರ್ಷ ಕಳೆದರೂ ಈಡೇರದ ಪರಿಣಾಮ ಇಲ್ಲಿನ ಬಿಳಗೂರು, ಹಾರ್ನಾಡು, ಕೆಳಬಾಗ, ಹೊಳಲು, ಕಗ್ಗನಳ್ಳ ಎಸ್ಟೇಟ್  ಮೊದಲಾದ ನಕ್ಸಲ್ ಪೀಡಿತ ಗ್ರಾಮಗಳ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ತೋಟದೂರು ಗ್ರಾಪಂ ವ್ಯಾಪ್ತಿಯ ಕಗ್ಗನಳ್ಳ ಗ್ರಾಮದಲ್ಲಿ ಹರಿಯುವ ಭದ್ರಾ ನದಿಯಾಚೆ ಇರುವ  ಬಿಳಗೂರು, ಹಾರ್ನಾಡು, ಕೆಳಭಾಗ, ಹೊಳಲು, ಕಗ್ಗನಳ್ಳ ಎಸ್ಟೇಟ್  ಮೊದಲಾದ ನಕ್ಸಲ್ ಪೀಡಿತ ಗ್ರಾಮಗಳ ಜನರು ಪ್ರತಿನಿತ್ಯ ತಮ್ಮ ದೈನಂದಿನ ವ್ಯವಹಾರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಸೇವೆ ಮತ್ತಿತರ ಸೌಲಭ್ಯಗಳಿಗಾಗಿ ಸಮೀಪದ ಕಗ್ಗನಳ್ಳ, ಬಾಳೆಹೊಳೆ, ಕಳಸ, ಬಾಳೆಹೊನ್ನೂರು, ಮಾಗುಂಡಿಯನ್ನು ಅವಲಂಬಿಸಿದ್ದಾರೆ. ಆದರೆ ಈ ಗ್ರಾಮಗಳ ಜನರು ಈ ಸೌಲಭ್ಯಗಳಿಗಾಗಿ ಕಗ್ಗನಳ್ಳ ಗ್ರಾಮದಲ್ಲಿ ಹರಿಯುವ ಭದ್ರಾ ನದಿಯನ್ನು ದಾಟಿ ಬರಬೇಕಿದೆ. ಆದರೆ ಸೇತುವೆಯ ಕೊರತೆಯಿಂದಾಗಿ ಗ್ರಾಮಗಳ ಜನತೆ ಮಳೆಗಾಲದ 6 ತಿಂಗಳು ಹೊರ ಜಗತ್ತಿನ ಸಂಪರ್ಕ ಇಲ್ಲದವರಂತೆ ಇರಬೇಕಾದ ಸಂಕಷ್ಟ ಎದುರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಉಕ್ಕಡದ ಸಹಾಯದಿಂದ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ನದಿ ದಾಟಿ ಬರುತ್ತಾರೆ. ಆದರೆ ಮಳೆಗಾಲದಲ್ಲಿ ಈ ಭಾಗದಲ್ಲಿ ಭಾರೀ ಮಳೆಯಾಗುವುದರಿಂದ ನದಿಯಲ್ಲಿ ಉಕ್ಕಡದ ಸೇವೆ ಲಭ್ಯವಾಗುತ್ತಿಲ್ಲ. ಈ ಕಾರಣಕ್ಕೆ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸುಮಾರು 10 ರಿಂದ 15 ಕಿ.ಮೀ.ದೂರ ನಡೆದು ಬಾಳೆಹೊಳೆಯಲ್ಲಿರುವ ಸೇತುವೆ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುತ್ತಿದ್ದಾರೆ.
ಕಗ್ಗನಳ್ಳ ಗ್ರಾಮದಲ್ಲಿ ಭದ್ರಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದರೇ ಈ ಗ್ರಾಮಗಳ ಜನರು ಕೇವಲ 10 ನಿಮಿಷಗಳಲ್ಲಿ ಕಗ್ಗನಳ್ಳ, ಬಾಳೆಹೊಳೆಯ ಸಂಪರ್ಕ ಪಡೆಯಬಹುದಾಗಿದೆ ಎಂಬುದು ನಿವಾಸಿಗಳ ಅಳಲಾಗಿದೆ.

ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಡಬೇಕೆಂದು ಈ ಗ್ರಾಮಗಳ ಜನರು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ, ಅರ್ಜಿ ಸಲ್ಲಿಸಿದ್ದಾರಾದರೂ ಇದುವರೆಗೂ ಪ್ರಯೋಜನವಾಗಿಲ್ಲ. ನದಿಯ ತಟದಲ್ಲಿರುವ ಕಗ್ಗನಳ್ಳ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನತೆಗೆ ಸುಸಜ್ಜಿತ ಸೇತುವೆಯ ಬೇಡಿಕೆ ಎರಡು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಅದು ಇಲ್ಲಿಯ ಗ್ರಾಮಸ್ಥರ ಪಾಲಿಗೆ ಇನ್ನೂ ಕೈಗೂಡಿಲ್ಲ. ಪರ್ಯಾಯ ವ್ಯವಸ್ಥೆ ಎಂಬಂತೆ ಇಲ್ಲಿ ಅನಾದಿಕಾಲದಿಂದ ಸುಧಾಕರ್ ಎಂಬವರು ತೆಪ್ಪದ ಮೂಲಕ ಜನರನ್ನು ನದಿ ದಾಟಿಸುತ್ತಿದ್ದರು. ಆದರೆ ಸುಧಾಕರ್ 2017ರ ಒಕ್ಟೋಬರ್ ತಿಂಗಳಿನಲ್ಲಿ ಉಕ್ಕುಡ ನಡೆಸುತ್ತಿದ್ದಾಗ ಉಕ್ಕಡ ಮಗುಚಿ ನೀರು ಪಾಲಾಗಿದ್ದರು. ಅಂದಿನಿಂದ ಇದುವರೆಗೂ ಗ್ರಾಮಸ್ಥರ ಸಮಸ್ಯೆ ಇನ್ನೂ ಬಿಗಡಾಯಿಸಿದೆ. 

ಈ ಗ್ರಾಮಗಳ ಒಟ್ಟ ಜನಸಂಖ್ಯೆ 1 ಸಾವಿರಕ್ಕೂ ಹೆಚ್ಚಿದೆ. ವ್ಯಾಪಾರ-ವಹಿವಾಟು,ಶಿಕ್ಷಣ, ಆರೋಗ್ಯ, ಕಂದಾಯ, ಪೊಲೀಸ್, ಉದ್ಯೋಗ, ದಿನಸಿ ವಸ್ತುಗಳು ಮೊದಲಾದ ನಾಗರೀಕ ಸೌಲಭ್ಯಗಳಿಗಾಗಿ ಗ್ರಾಮಸ್ಥರು ಕಳಸ, ಬಾಳೆಹೊಳೆಯಂತಹ ಊರುಗಳನ್ನು ಅವಲಂಬಸಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರು ಕಡಿಮೆಯಾದಾಗ ನದಿಗೆ ಮರದ ದಿಮ್ಮಿಗಳನ್ನು ಜೋಡಿಸಿ ಅದರ ಮುಖಾಂತರ ನದಿಯನ್ನು ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಇವರ ಸ್ಥಿತಿ ಚಿಂತಾಜನಕವಾಗಿದೆ. ಪ್ರತಿನಿತ್ಯ ನೂರಾರು ಶಾಲಾ ಮಕ್ಕಳು, ಉದ್ಯೋಗಿಗಳು, ಕೂಲಿಕಾರ್ಮಿಕರು, ಅನಾರೋಗ್ಯ ಪೀಡಿತರು ಕಳಸ ಇನ್ನಿತರೆ ಪ್ರದೇಶಗಳಿಗೆ ಹೋಗಬೇಕಾಗಿದೆ ಆದರೆ ಇತ್ತ ಉಕ್ಕುಡವೂ ಇಲ್ಲದೆ ಇತ್ತ ತಮ್ಮ ಬೇಡಿಕೆಯನ್ನು ಈಡೇರಿಸದೆ ಗ್ರಾಮಸ್ಥರು ಅತಂತ್ರರಾಗಿದ್ದಾರೆ.

ಸುದಾಕರ್ ಇರುವಾಗ ಹೇಗೂ ತನ್ನು ಜೀವವನ್ನು ಪಣಕ್ಕಿಟ್ಟು ನಮ್ಮನ್ನು ಉಕ್ಕುಡದ ಮುಖಾತರ ದಡ ಸೇರಿಸುತ್ತಿದ್ದರು.ಆದರೆ ಈಗ ಅವರಿಲ್ಲದೆ ನಾವು ಸಾಕಷ್ಟು ದೂರ ನಡೆದುಕೊಂಡು ಬಂದು ಬಾಳೆಹೊಳೆಯ ಸೇತುವೆಯ ಮುಖಾಂತರ ಶಾಲೆ ಹೋಗಬೇಕಾಗಿದೆ ಎಂದು ಈ ಬಾಗದ ಶಾಲಾ ವಿದ್ಯಾರ್ಥಿಗಳು ಹೇಳುತ್ತಾರೆ.

"ನಾವು ಕಳೆದ ಮೂವತ್ತು ವರ್ಷಗಳಿಂದ ಕಗ್ಗನಳ್ಳ ಗ್ರಾಮದಲ್ಲಿ ತೂಗು ಸೇತುವೆ ನಿರ್ಮಿಸಿ ಕೊಡಿ ಎಂದು ಸರ್ಕಾರಕ್ಕೆ, ಶಾಸಕರಿಗೆ ಅರ್ಜಿ ಕೊಡುತ್ತಲೇ ಬಂದಿದ್ದೀವಿ. ಆದ್ರೆ, ಐದು ವರ್ಷಗಳಿಗೊಮ್ಮೆ ಓಟು ಕೇಳಲು ಬರುವ ಜನಪ್ರತಿನಿಧಿಗಳು, ಯಾವತ್ತೂ  ನಮ್ಮ ಗೋಳು ಕೇಳಲು ಬಂದಿಲ್ಲ.  ಶ್ರೀಮಂತರು ವಾಸವಿರುವ ಕಡೆ ಎಲ್ಲದಂರಲ್ಲಿ ತೂಗುಸೇತುವೆ ನಿರ್ಮಿಸಿದ್ದಾರೆ, ಆದರೆ ಬಡವರ ಪ್ರಾಣಕ್ಕೆ ಈ ರಾಜಕಾರಣಿಗಳು ನಯಾ ಪೈಸೆಯ ಬೆಲೆ ಕೊಡಲ್ಲ ಎಂದು  ಆಕ್ರೋಶದಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ ಈ ಬಾಗದ ಗ್ರಾಮಸ್ಥರು.

ಈ ಹಿಂದೆ ಇಲ್ಲಿ ಸುಧಾಕರ್ ಉಕ್ಕಡದ ಮೂಲಕ ನದಿ ದಾಟಿಸುತ್ತಿದ್ದರು. ಇದರಿಂದ ನಮಗೆ ಮಳೆಗಾಲದಲ್ಲಿ ಯಾವುದೇ ತೊಂದರೆ ಇರುತ್ತಿರಲಿಲ್ಲ. ಈಗ ಇಲ್ಲಿ ನದಿ ದಾಟಲು ಯಾವುದೇ ವ್ಯವಸ್ಥೆಗಳಿಲ್ಲ. ಕೂಲಿ ಮಾಡುವ ನಾವು ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಇಲ್ಲಿಗೊಂದು ತೂಗು ಸೇತುವೆ ಮಾಡಿಕೊಡಿ ಎಂದು ಸಂಬಂದಿಸಿದವರಿಗೆ ಮನವಿ ನೀಡಿ ಸಾಕಾಯಿತೇ ಹೊರತು ಬೇಡಿಕೆ ಈಡೇರಲಿಲ್ಲ.
- ಅಶೋಕ ಕಗ್ಗನಳ್ಳ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News