ಕಳಸ: ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪುತ್ತಿರುವ ತೂಗು ಸೇತುವೆಗಳು

Update: 2018-06-16 17:43 GMT

ಕಳಸ, ಜೂ.16: ಮಲೆನಾಡು ಭಾಗಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿದ ತೂಗುಸೇತುವೆ ತಜ್ಞ ಗಿರೀಶ್ ಭಾರದ್ವಜ್ ಪದ್ಮ ಪುರಸ್ಕಾರ ಪಡೆದು ರಾಜ್ಯದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ. ಆದರೆ ಅವರು ಮಲೆನಾಡಿನ ವಿವಿಧೆಡೆ ನಿರ್ಮಿಸಿರುವ ತೂಗು ಸೇತುವೆಗಳು ಸರಕಾರ ನಿರ್ಲಕ್ಷಕ್ಕೆ ಒಳಗಾಗಿ ಅವಸಾನದ ಅಂಚಿಗೆ ತುಲುಪುತ್ತಿವೆ ಎಂದು ಈ ಭಾಗದ ನಾಗರಿಕರು ಆರೋಪಿಸಿದ್ದಾರೆ.

ಕಳಸ ಹೊಬಳಿಯ ಸುತ್ತಮುತ್ತ ಭದ್ರಾ, ಹೇಮಾವರಿ ಸೇರಿದಂತೆ ನೂರಾರು ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಜನರು ಹೋಗಬೇಕಾದರೆ ಸೇತುವೆ ಕೊರತೆ ಈ ಭಾಗದಲ್ಲಿ ಹೆಚ್ಚಿದೆ. ಈ ಕಾರಣಕ್ಕೆ ತೆಪ್ಪ,ದೋಣಿಗಳ ಸಹಾಯದಿಂದ ಜನರು ತಮ್ಮ ಗ್ರಾಮಗಳನ್ನು ತಲುಪಬೇಕಾಗಿರುವ ಶೋಚನೀಯ ಸಂಗತಿ ಈ ಭಾಗದಲ್ಲಿ ಇನ್ನೂ ಇದೆ. ಈ ಹಿಂದೆ ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿದು ಊರಿನ ಸಂಪರ್ಕವೇ ಕಡಿದು ಹೋಗುತ್ತಿತ್ತು. ಇದರಿಂದ ಬಹಳಷ್ಟು ಹಳ್ಳಿಗಳ ಜನರ ಸ್ಥಿತಿ ಮರುಕ ಹುಟ್ಟಿಸುತ್ತಿತ್ತು. ಶಾಲಾ ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುತ್ತಿದ್ದರು.

ಇಂತಹ ಹಳ್ಳಿ ಪ್ರದೇಶಗಳಿಗೆ ಸರಕಾರ ಕೋಟ್ಯಾಂತರ ರೂ. ವೆಚ್ಚ ಮಾಡಿ ಕಳಸ ಹೋಬಳಿಯ ಭದ್ರಾ ನದಿಯ ನೆಲ್ಲಿಬೀಡು, ಜಾಂಬ್ಲೆ,ಆನ್‍ಮಗೆ,ಅಂಬಾತೀರ್ಥ,ವಶಿಷ್ಟ ತೀರ್ಥ ಮುಂತಾದ ಕಡೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಎಂಟು ವರ್ಷಗಳ ಹಿಂದೆ ತೂಗು ಸೇತುವೆಗಳನ್ನು ನಿರ್ಮಿಸುವುದರ ಮುಖಾಂತರ ಆ ಬಾಗದ ಜನರ ಸಮಸ್ಯೆಯನ್ನು ನಿವಾರಿಸಿದ್ದರು.

ಈ ತೂಗು ಸೇತುವೆಯಿಂದ ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಮಸ್ಯೆಯನ್ನು ತಪ್ಪಿಸಿ ಸಂಪರ್ಕ ಕೊಂಡಿಯನ್ನು ಒಂದು ಮಾಡಿಸಿದಂತಾಗಿದೆ. ಅಲ್ಲದೆ ಈ ತೂಗು ಸೇತುವೆಗಳು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ. ದೂರದೂರಿನಿಂದ ಬರುವ ಪ್ರವಾಸಿಗರಿಗೆ ಇಂತಹ ತೂಗು ಸೇತುವೆಗಳು ಆಕರ್ಷಣೆಗೆ ಒಳಗಾಗಿದೆ.ಪ್ರತೀ ದಿನ ನೂರಾರೂ ಪ್ರವಾಸಿಗರು ಬಂದು ಈ ತೂಗು ಸೇತುವೆಯಲ್ಲಿ ಖುಷಿಯಿಂದ ತೂಗಾಡುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ಆದರೆ ಅಂತಹ ತೂಗು ಸೇತುವೆಗಳು ನಿರ್ವಹಣೆ ಇಲ್ಲದೆ ಅವಸಾನದ ಅಂಚಿಗೆ ತಲುಪುತ್ತಿದೆ. ಈ ತೂಗು ಸೇತುವೆಯನ್ನು ನಿರ್ಮಾಣ ಮಾಡಿದ ನಂತರ ಪ್ರತೀ ವರ್ಷ ಅದರ ನಿರ್ವಹಣೆ ಮಾಡಬೇಕಾಗುತ್ತದೆ. ತುಕ್ಕು ಹಿಡಿಯದಂತೆ ಅದಕ್ಕೆ ಬಣ್ಣ ಹೊಡೆಯಬೇಕಾಗುತ್ತದೆ. ಅಲ್ಲದೆ ಅದರ ರೋಪ್‍ಗಳಿಗೆ ಗ್ರೀಸ್ ಹೊಡೆದು ಅದನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಹೊಣೆಗಾರಿಗೆ ಆಯಾ ಗ್ರಾಮದ ಪಂಚಾಯತ್ ಜವಾಬ್ದಾರಿಯಾಗಿದೆ. ಈ ತೂಗುಸೇತುವೆಗಳ ನಿರ್ವಹಣೆಗೆ ಬೇಕಾಗುವಷ್ಟು ಅನುದಾನ ಗ್ರಾಪಂನಲ್ಲಿಲ್ಲದ ಕಾರಣ ಇಲ್ಲಿನ ಗ್ರಾಪಂಗೆ ಇವುಗಳ ನಿರ್ವಹಣಗೆ ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಇಲ್ಲಿನ ನೂರಾರು ತೂಗು ಸೇತುವೆಗಳ ಪೈಕಿ ಕೆಲ ತೂಗು ಸೇತುವೆಗಳು ನಿರ್ಮಾಣವಾಗಿ 10 ವರ್ಷವಗಳು ಕಳೆದಿದ್ದರೂ ನಿರ್ವಹಣೆಯ ಗೋಜಿಗೆ ಸರಕಾರ ಮುಂದಾಗದ ಕಾರಣ ತೂಗು ಸೇತುವೆಗಳು ಶಿಥಿಲಗೊಂಡಿವೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.

ಕೆಲ ತೂಗು ಸೇತುವೆಗಳ ಕಬ್ಬಿಣದ ಕಂಬಿಗಳು, ರೋಪ್ ಗಳು ತುಕ್ಕು ಹಿಡಿದಿವೆ. ಸೇತುವೆಯ ಅಡಿ ಭಾಗಕ್ಕೆ ಅಳವಡಿಸಿರುವ ಕಬ್ಬಿಣದ ರಾಡ್‍ಗಳೂ ಸಂಪೂರ್ಣವಾಗಿ ತುಕ್ಕು ಹಿಡಿದು ಬೀಳೋ ಸ್ಥಿತಿಯಲ್ಲಿವೆ. ಸೇತುವೆಯ ಮೇಲ್ಬಾಗ ಪಾಚಿ ಕಟ್ಟಿಕೊಂಡಿದೆ. ಇದರಿಂದ ಮಳೆಗಾಲದಲ್ಲಿ ಅದೆಷ್ಟೋ ಜನರು ಜಾರಿ ಬಿದ್ದಿರುವ ಘಟನೆಗಳು ಇವೆ. ಕೆಲವೊಂದು ಸೇತುವೆಗೆ ಅಳವಡಿಸಿದ ತಡೆಬೇಲಿ ಕಳ್ಳರ ಪಾಲಾಗಿವೆ. ಇಷ್ಟಾದರೂ ಸಂಬಂಧಿಸಿದವರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆಂದು ಸ್ಥಳೀಯರು ದೂರಿದ್ದಾರೆ.

ಅಂದು ನಿರ್ಮಾಣ ಮಾಡಿದ ತೂಗು ಸೇತುವೆಗಳಿಗೆ ಇಂದು ನಿರ್ವಹಣೆಗೆ ಬೇಕಾದ ಅನುದಾನ ಕೂಡ ನೀಡಬೇಕಾದ ಅನಿರ್ವಾಯತೆ ಅವರ ಮುಂದಿದೆ. ಇಲ್ಲವಾದಲ್ಲಿ ತೂಗು ಸೇತುವೆಗಳು ಸಂಪೂರ್ಣ ಶಿಥಿಲಗೊಂಡು ಗ್ರಾಮಸ್ಥರ ಅನುಕೂಲಕ್ಕೆ ಬರದೆ ಮತ್ತೆ ಸಂಪರ್ಕ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.

ಇಲ್ಲಿಯ ತೂಗು ಸೇತುವೆಗಳು ಪ್ರವಾಸಿಗರ ಕಣ್ಮಣ ಸೆಳೆಯುತ್ತಿದೆ.ಪ್ರಕೃತಿದತ್ತವಾದ ಇಲ್ಲಿಯ ಪರಿಸರದ ಸೌಂದರ್ಯವನ್ನು ಈ ಸೇತುವೆಗಳು ಮತ್ತಷ್ಟು ಹಿಮ್ಮಡಿಗೊಳಿಸುತ್ತಿವೆ.ಆದರೆ ಇದರ ನಿರ್ವಹಣೆಯ ಕೊರತೆಯಿಂದ ಸೇತುವೆಗಳು ತುಕ್ಕು ಹಿಡಿದು ಹೋಗುತ್ತಿವೆ.
- ಅರುಣ್, ಬೆಂಗಳೂರು ಪ್ರವಾಸಿಗ

ಇಲ್ಲಿಯ ತೂಗುಸೇತುವೆಗಳು ನಿರ್ವಹಣೆಯ ಕೊರತೆಯಿಂದ ತುಕ್ಕು ಹಿಡಿದು ಹಾಳಾಗುತ್ತಿರುವುದು ನಿಜ.ಆದರೆ ಇದರ ನಿರ್ವಹಣೆಯ ವೆಚ್ಚ ಅತೀ ದುಬಾರಿ ಆಗುವುದರಿಂದ ಗ್ರಾಪಂ ಗಳಿಂದ ಅಷ್ಟೊಂದ ಅನುಧಾನ ನೀಡಲು ಸಾದ್ಯವಾಗುವುದಿಲ್ಲ.ಶಾಸಕರು ಅಥವಾ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ವಹಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗಿದೆ.
- ಪಕೀರೇಗೌಡ, ಪಿಡಿಒ, ಕಳಸ ಗ್ರಾಪಂ

ಇಲ್ಲಿಯ ತೂಗು ಸೇತುವೆಗಳು ಹಲವಾರು ಹಳ್ಳಿಗಳ ಸಂಪರ್ಕ ಕೊಂಡಿಯಾಗಿದೆ. ಇದರ ಪ್ರಯೋಜನವನ್ನು ಸಾವಿರಾರು ಜನರು ಪಡೆಯುತ್ತಿದ್ದಾರೆ.ಆದರೆ ಇತ್ತೀಚೆಗೆ ಇಂತಹ ತೂಗು ಸೇತುವೆಗಳು ನಿರ್ವಹಣೆಯ ಕೊರತೆಯಿಂದ ಹಾಲಾಗುತ್ತಿದೆ.ಸಂಬಂದ ಪಟ್ಟವರು ಇದರ ಬಗ್ಗೆ ಮುತುವರ್ಜಿ ತೆಗೆದುಕೊಳ್ಳುವುದು ಸೂಕ್ತ.

- ಸುದೀರ್ ಬಂಡಾರಿ;ಕಳಸ ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News