ಚಿಕ್ಕಮಗಳೂರು: ಸಂಭ್ರಮದ ಈದುಲ್ ಫಿತ್ರ್ ಆಚರಣೆ

Update: 2018-06-16 18:09 GMT

ಚಿಕ್ಕಮಗಳೂರು, ಜೂ.16: ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು. 

ನಗರದ ಕೆಂಪನಹಳ್ಳಿಯ ಈದ್ಗಾ ಮೈದಾನ ಮತ್ತು ವಿಜಯಪುರದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಧರ್ಮ ಗುರುಗಳು ಮಾತನಾಡಿದರು.

ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮಾಜಿ ಸಚಿವ ಸಿ.ಆರ್.ಸಗೀರ್ ಅಹಮದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮೊಹಮದ್, ಕೆಪಿಸಿಸಿ ಕಿಸಾನ್ ಸೆಲ್ ಕಾರ್ಯಾಧ್ಯಕ್ಷ ಸಿ.ಎನ್.ಅಕ್ಮಲ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿಸಾರ್ ಅಹಮದ್, ನಗರಸಭೆ ಸದಸ್ಯ ಅಫ್ಸರ್ ಅಹ್ಮದ್ ಇತರರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಈದ್ಗಾ ಮೈದಾನಕ್ಕೆ ಶನಿವಾರ ಬೆಳಗ್ಗೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮುಸ್ಲಿಮರಿಗೆ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು. ರಮಝಾನ್  ಒಂದು ಪವಿತ್ರವಾದ ಹಬ್ಬ. ಒಂದು ತಿಂಗಳಿನಿಂದ ಉಪವಾಸ ಆಚರಿಸಿರುವ ನೀವು ಇಂದು ಉಪವಾಸವನ್ನು ಪೂರ್ಣಗೊಳಿಸಿದ್ದೀರಿ. ನಿಮ್ಮ ಎಲ್ಲ ಆಸೆಗಳನ್ನೂ ದೇವರು ಈಡೇರಿಸಲಿ ಎಂದು ಹಾರೈಸಿದರು.

ವಿಧಾನಪರಿಷತ್‍ನ ನೂತನ ಸದಸ್ಯ ಎಸ್.ಎಲ್.ಭೋಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಮುಸ್ಲಿಮರಿಗೆ ಶುಭಾಷಯಗಳನ್ನು ಸಲ್ಲಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬೀರೂರು: ವಿಜೃಂಭಣೆಯ ಈದ್ ಉಲ್ ಫಿತರ್
ಪಟ್ಟಣದಲ್ಲಿ ಶನಿವಾರ ನಡೆದ ಈದ್ ಉಲ್ ಫಿತ್ರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಸುನ್ನಿ ಮತ್ತು ತಬ್ಲೀಕ್ ಜಮಾತ್ ಪಂಗಡದವರು ಹೊಸ ವಸ್ತ್ರ ಧರಿಸಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಳೇಪೇಟೆಯ ಜಾಮಿಯಾ ಮಸೀದಿ. ಬಳ್ಳಾರಿ ಕ್ಯಾಂಪ್‍ನ ಮಕ್ಕಾ ಮಸೀದಿ. ಹಾಲಪ್ಪ ಬಡಾವಣೆಯ ಮದೀನಾ ಮಸೀದಿ ಮತ್ತು ಮಸ್ಚೀದೆ ಖುಬಾ ಮಸೀದಿಯಿಂದ ಮೆರವಣಿಗೆಯ ಮೂಲಕ ಸಾಗಿ ತರೀಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು 09:30 ಗಂಟೆಯವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಹಬ್ಬ ಶಾಂತಿಯುತವಾಗಿ ನಡೆಯಲು ಪೊಲೀಸ್ ಬಂದೋಬಸ್ತ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News