ಕೆರೆ, ಕಟ್ಟೆ ಖಾಸಗಿಯವರ ಮಂಜೂರಾತಿಗೆ ಅವಕಾಶವಿಲ್ಲ; 2000ರ ಸುತ್ತೋಲೆ ರದ್ದು: ಸಚಿವ ದೇಶಪಾಂಡೆ

Update: 2018-06-16 18:51 GMT

ಬೆಂಗಳೂರು, ಜೂ.16: ಸರಕಾರಿ ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳಿಗಳನ್ನು ಖಾಸಗಿ ಉದ್ದಿಮೆಗಳು ಮತ್ತು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿದ್ದ 2000ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಸರಕಾರಿ ಜಲಮೂಲ ಪ್ರದೇಶಗಳನ್ನು ಖಾಸಗಿ ಉದ್ದಿಮೆಗಳು ಮತ್ತು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಬಹುದೆಂಬ ಯಾವುದೆ ಪ್ರಸ್ತಾಪವನ್ನು ಕಳುಹಿಸದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರಕಾರಿ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಅಥವಾ ಖಾಸಗಿ ಉದ್ದೇಶಕ್ಕಾಗಲಿ ಉಪಯೋಗಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ 2000ರ ಸುತ್ತೋಲೆಯನ್ನು ರದ್ದು ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮ 2014ರ ಪ್ರಕರಣ 1(ಎಚ್)ರ ಅನ್ವಯ ‘ನೀರು ಇರಲಿ ಅಥವಾ ಇಲ್ಲದಿರಲಿ, ಸರಕಾರಿ ಕೆರೆ, ಖರಾಬು, ಕುಂಟೆ, ಕಟ್ಟೆ, ರಾಜಕಾಲುವೆ ಮುಂತಾದವೆಲ್ಲವೂ ಜಲಮೂಲ ಪ್ರದೇಶಗಳೆ ಆಗಿರುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದಾಗಿ ರಾಜ್ಯದ ಜಲಮೂಲಗಳನ್ನು ಉಳಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News