ಭಡ್ತಿ ಮೀಸಲು ಮಸೂದೆಗೆ ರಾಷ್ಟ್ರಪತಿ ಅಂಕಿತ : ಹಿಂಭಡ್ತಿ ಆತಂಕಕ್ಕೆ ಸಿಲುಕಿದ್ದ ಪರಿಶಿಷ್ಟ ನೌಕರರು ನಿರಾಳ

Update: 2018-06-16 18:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 16: ಹಿಂಭಡ್ತಿ ಆತಂಕಕ್ಕೆ ಸಿಲುಕಿದ್ದ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿರಕ್ಷಣೆಗಾಗಿ ರಾಜ್ಯ ಸರಕಾರ ರವಾನಿಸಿದ್ದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಎಸ್ಸಿ-ಎಸ್ಟಿ ನೌಕರರಿಗೆ ಹಿಂಭಡ್ತಿ ಶಿಕ್ಷೆ ತಪ್ಪಿದಂತಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ನೌಕರರು, ಭಡ್ತಿ ಮೀಸಲಾತಿ ಕಾಯ್ದೆಯನ್ವಯ ಈ ಹಿಂದೆ ಹೊಂದಿದ್ದ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ. ಅಲ್ಲದೆ. ಭಡ್ತಿ ಪಡೆದ ಸಿಬ್ಬಂದಿ ನಿವೃತ್ತಿಯ ವರೆಗೆ ಅದೇ ಹುದ್ದೆಯಲ್ಲಿ ಇರಲಿದ್ದಾರೆ.

ರಾಜ್ಯ ಸರಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆಂದು ಕೇಂದ್ರ ಗೃಹ ಖಾತೆ ಅಧೀನ ಕಾರ್ಯದರ್ಶಿ ರಾಜ್ಯ ಸರಕಾರಕ್ಕೆ ಶುಕ್ರವಾರ ಪತ್ರ ಬರೆದು ತಿಳಿಸಿದ್ದಾರೆ. 2000ರಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಭಡ್ತಿ ಮೀಸಲಾತಿ ಕಾಯ್ದೆಯನ್ನು 2017ರ ಫೆಬ್ರವರಿ 9ರಂದು ರದ್ದುಪಡಿಸಿತ್ತು.

ಸುಪ್ರೀಂ ಕೋರ್ಟ್, ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು, ಭಡ್ತಿಯಿಂದ ವಂಚಿತರಾದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರಿಗೆ ಮುಂಭಡ್ತಿ ನೀಡುವ ಪ್ರಕ್ರಿಯೆಯನ್ನು ಅದೇ ವರ್ಷದ ಆಗಸ್ಟ್ 9ರೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು.

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತರಕ್ಷಣೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 2017ರ ನವೆಂಬರ್‌ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಭಡ್ತಿ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆದಿತ್ತು. ಆದರೆ, ಇದಕ್ಕೆ ಅನುಮೋದನೆ ನೀಡದ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗೆ ರವಾನಿಸಿದ್ದರು.

ರಾಷ್ಟ್ರಪತಿ ಕ್ರಮಕ್ಕೆ ಸಿದ್ದರಾಮಯ್ಯ ಸ್ವಾಗತ

ಪರಿಶಿಷ್ಟ ಜಾತಿ (ಎಸ್ಸಿ)ಮತ್ತು ಪರಿಶಿಷ್ಟ ಪಂಗಡದ(ಎಸ್ಟಿ) ನೌಕರರಿಗೆ ಮುಂಭಡ್ತಿ ನೀಡುವ ವಿಷಯದಲ್ಲಿ ಹಿಂದಿನ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಶನಿವಾರ ತನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆಗೆ ಅಂಕಿತ ಹಾಕಿದ ರಾಷ್ಟ್ರಪತಿಯವರಿಗೆ ಧನ್ಯವಾದ ಸಲ್ಲಿಸುವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಹಿತ ಕಾಯುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಅದನ್ನು ರಾಜ್ಯಪಾಲರು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿದ್ದರು. ರಾಷ್ಟ್ರಪತಿಯವರು ಇದೀಗ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿರುವುದು ಸಂತಸದ ವಿಷಯ ಎಂದರು.

‘ವಿಧಾನಸಭೆ ಚುನಾವಣೆಗೂ ಮೊದಲು ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿ ಕಾಯ್ದೆ ಅಂಗೀಕಾರ ಆಗಿದ್ದರೆ, ರಾಜಕೀಯವಾಗಿ ಅನುಕೂಲವಾಗುತ್ತಿತ್ತು. ಸಾಮಾಜಿಕ ನ್ಯಾಯಕ್ಕಾಗಿ ಕಾಯ್ದೆ ರೂಪಿಸಲಾಗಿತ್ತು. ತೀವ್ರ ವಿರೋಧದ ಮಧ್ಯೆ ಮಸೂದೆಗೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು’
-ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News