ಶಿಫಾರಸು ಪುರಸ್ಕರಿಸದಿದ್ದರೆ ಬೆಲೆ ತೆರಬೇಕಾಗುತ್ತದೆ: ಬಿಜೆಪಿಗೆ ಸಿದ್ಧರಾಮ ಸ್ವಾಮಿ ಎಚ್ಚರಿಕೆ

Update: 2018-06-16 19:00 GMT

ಬೆಂಗಳೂರು, ಜೂ. 16: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಂಬಂಧದ ರಾಜ್ಯ ಸರಕಾರದ ಶಿಫಾರಸನ್ನು ಕೇಂದ್ರ ಸರಕಾರ ಪುರಸ್ಕರಿಸದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲಿ ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮಿ ಎಚ್ಚರಿಸಿದ್ದಾರೆ.

ಶನಿವಾರ ಬೆಳಗಾವಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಓರ್ವ ವಿಶೇಷ ವ್ಯಕ್ತಿ. ಅಲ್ಲದೆ, ಬಸವಣ್ಣನ ಅನುಯಾಯಿ ಹೌದು. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುತ್ತಾರೆಂಬ ವಿಶ್ವಾಸವಿದೆ. ಈ ಸಂಬಂಧ ಶೀಘ್ರದಲ್ಲೆ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದರು.

ಸುಳ್ಳು-ಸಂಭ್ರಮ: ಕೇಂದ್ರ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಶಿಫಾರಸು ತಿರಸ್ಕರಿಸಿದೆ ಎಂಬುದು ಸುಳ್ಳು. ನಮ್ಮ ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ದೂರಿದರು.

ಸಚಿವ ಸ್ಥಾನ ಕೊಡಿ: ಎಂ.ಬಿ.ಪಾಟೀಲ್ ಮತ್ತು ಬಸವರಾಜ ಹೊರಟ್ಟಿ ಅವರಿಗೆ ಮೈತ್ರಿಕೂಟ ಸರಕಾರ ಕೂಡಲೇ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆಂಬ ಕಾರಣಕ್ಕೆ ಅವರನ್ನು ಹೊರಗಿಟ್ಟಿರುವುದು ಸಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News