ಕಾರು ಅಪಘಾತಕ್ಕೆ ಕಾರಣವಾದ ನೀರಿನ ಬಾಟಲಿ!

Update: 2018-06-17 09:15 GMT

ಲಂಡನ್, ಜೂ.17: ಸಸೆಕ್ಸ್‌ನಲ್ಲಿ ಕಾರೊಂದು ಗ್ಯಾಸ್ ಸ್ಟೇಷನ್ ಬಳಿ ಮಗುಚಿಕೊಂಡು ಚಾಲಕಿ ಪವಾಡಸದೃಶವಾಗಿ ಯಾವುದೇ ಗಾಯಗಳಿಲ್ಲದೇ ಪಾರಾದ ಘಟನೆ ವರದಿಯಾಗಿದೆ. ಇದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ಈ ಅಪಘಾತಕ್ಕೆ ಕಾರಣವಾದ್ದೇನು ಎನ್ನುವುದೇ ಕುತೂಹಲದ ವಿಚಾರ.

ಚಾಲಕಿ ಕಾರನ್ನು ಸಂಚಾರ ದಟ್ಟಣೆಯ ಪ್ರದೇಶಕ್ಕೆ ತಂದಾಗ ಕಾರಿನ ಬ್ರೇಕ್ ವಿಫಲವಾಗಿರುವುದು ಗಮನಕ್ಕೆ ಬಂತು. ರಸ್ತೆಯಲ್ಲಿ ಇತರ ಕಾರುಗಳಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಮಯಪ್ರಜ್ಞೆ ಮೆರೆದ ಚಾಲಕಿ ಕಾರನ್ನು ಪೆಟ್ರೋಲ್ ಬಂಕ್ ಪಕ್ಕದ ರಸ್ತೆಗೆ ತಿರುಗಿಸಿದರು. ಪೆಟ್ರೋಲ್‌ ಬಂಕ್‌ನ ಲೋಹದ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಅಡಿಮೇಲಾಗಿ ಮಗುಚಿಕೊಂಡಿತು.

ಬ್ರೇಕ್ ಪೆಡಲ್ ಅದುಮಲು ಸಾಧ್ಯವಾಗದಿದ್ದುದು ಅಪಘಾತಕ್ಕೆ ಕಾರಣ ಎನ್ನುವುದು ಮಹಿಳೆಯ ವಾದ. ಆದರೆ ಪೊಲೀಸರು ಅಪಘಾತಕ್ಕೀಡಾದ ಕೆಂಪು ಫೋರ್ಡ್ ಎಫ್‌ಎ ಕಾರನ್ನು ಪರಿಶೀಲಿಸಿದಾಗ ಯಾವ ಬ್ರೇಕ್ ದೋಷವೂ ಕಾಣಿಸಲಿಲ್ಲ. ಬದಲಾಗಿ ಅವರಿಗೆ ಕಂಡದ್ದು ಒಂದು ನೀರಿನ ಬಾಟಲಿ!

"ನೀರು ತುಂಬಿದ್ದ ಬಾಟಲಿಯೊಂದು ಬ್ರೇಕ್ ಪೆಡಲ್‌ನ ಕೆಳಗೆ ಸಿಕ್ಕಿಹಾಕಿಕೊಂಡಿತ್ತು. ಬಹುಶಃ ಈ ಕಾರಣದಿಂದ ಬ್ರೇಕ್ ಪೆಡಲ್ ಕಾರ್ಯನಿರ್ವಹಿಸದೇ ಅಪಘಾತ ಸಂಭವಿಸಿರಬೇಕು" ಎಂದು ಪೊಲೀಸ್ ಕಮಿಷನರ್ ಗ್ರೇ ಡಗ್ಲಾಸ್ ಹೇಳಿದ್ದಾರೆ.

ಬ್ರೇಕ್ ಅದುಮಲು ಸಾಧ್ಯವಾಗದಿದ್ದಾಗ ಚಾಲಕಿ ಅಧೀರರಾಗಿದ್ದಾರೆ. ಪರಿಣಾಮ ಅಪಘಾತ ಸಂಭವಿಸಿದೆ. ಆದರೆ ಸಮಯಪ್ರಜ್ಞೆಯಿಂದ ಪೆಟ್ರೋಲ್ ಬಂಕ್ ರಸ್ತೆಗೆ ಕಾರು ತಿರುಗಿಸದಿದ್ದರೆ ಭೀಕರ ಅನಾಹುತ ಸಂಭವಿಸುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ, "ಕಾರು ಹೊರಡುವ ಮುನ್ನ ಎಲ್ಲ ವಸ್ತುಗಳನ್ನು ಜೋಡಿಸಿ ಇಡಲಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು" ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News