ಬೀಟೆ ಮರದ ದಿಮ್ಮಿಗಳ ಅಕ್ರಮ ಸಾಗಾಟ : ಮಾಲು ಸಹಿತ ಆರೋಪಿಗಳ ವಶ

Update: 2018-06-17 11:53 GMT

ಮಡಿಕೇರಿ, ಜೂ.17 :ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿರುವ ಘಟನೆ ಏಳನೇ ಹೊಸಕೋಟೆ ಸಮೀಪ ತೊಂಡೂರು ಗ್ರಾಮದಲ್ಲಿ ನಡೆದಿದೆ. 

ಮಾಲು ಸಹಿತ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ರವಿವಾರ ಮಧ್ಯಾಹ್ನ 12 ಗಂಟೆಗೆ ಲೈಲ್ಯಾಂಡ್ ಗೂಡ್ಸ್(ಕೆಎ12ಬಿ4593) ವಾಹನದಲ್ಲಿ ಆಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ತುಂಬಿಸಿ ಸಾಗಿಸುತ್ತಿರುವ ಸುಳಿವು ಅರಣ್ಯ ಅಧಿಕಾರಿಗಳಿಗೆ ದೊರೆತಿದೆ. ಆನೆಕಾಡು ಬಳಿ ಉಪವಲಯಾರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳು ವಾಹನವನ್ನು ತಪಾಸಣೆಗಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ. 

ಆದರೆ ವಾಹನವನ್ನು ನಿಲ್ಲಿಸದ ಆರೋಪಿಗಳು ಸಿನಿಮೀಯ ಮಾದರಿಯಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು 7ನೇ ಹೊಸಕೋಟೆಯ ಮೂಲಕ ತೊಂಡೂರು ಮಾರ್ಗದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭ ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ವಾಹನವನ್ನು ಬೆನ್ನಟ್ಟಿದ್ದಾರೆ. ಕಂಬಿಬಾಣೆ ಗ್ರಾಮದ ಆಮೆಕೆರೆ ಬಳಿ ಅರಣ್ಯ ಇಲಾಖೆಯ ವಾಹನ ಆರೋಪಿಗಳ ವಾಹನಕ್ಕೆ ಹಿಂಬಂದಿಯಿಂದ ಢಿಕ್ಕಿಪಡಿಸಿದ್ದಾರೆ. ಇದರಿಂದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿದ್ದು, ತೋಟದ ಬೇಲಿಗೆ ಢಿಕ್ಕಿಯಾಗಿದೆ.

ವಾಹನದಲ್ಲಿದ್ದ ನಾಲ್ವರು ಆರೋಪಿಗಳು ಕಾಫಿ ತೋಟದ ಮೂಲಕ ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭ ಉಪವಲಯಾರಣ್ಯಾಧಿಕಾರಿ ರಂಜನ್, ಸಿಬ್ಬಂದಿಗಳ ತಂಡ ಹಾಗೂ ಗ್ರಾಮಸ್ಥರು ತೋಟದೊಳಗೆ ನುಗ್ಗಿ ಆರೋಪಿಗಳಾದ ಸುಂಟಿಕೊಪ್ಪದ ಶಾಹಿಲ್ ಹಾಗೂ ಮಡಿಕೇರಿಯ ಚಾಲಕ ಉಮೇಶ್ ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಸುಂಟಿಕೊಪ್ಪದ ಆಶಿಕ್ ಹಾಗೂ ರಫೀಕ್ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.

ಸುಮಾರು 1 ಲಕ್ಷ ರೂ. ಮೌಲ್ಯದ ಬೀಟೆ ಮರದ ದಿಮ್ಮಿಗಳು ಹಾಗೂ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅರಣ್ಯ ಸಿಬ್ಬಂದಿಗಳಾದ ಸಂತೋಷ್, ಜೀಪ್ ಚಾಲಕ ಸತೀಶ್, ಆರ್ ಆರ್ ಟಿ ಸಿಬ್ಬಂದಿಗಳಾದ ಶಾಂತ, ಹೊನ್ನಪ್ಪ, ನವೀನ, ಗಿರೀಶ, ಶಿಬಾ ಹಾಗೂ ಕಂಬಿಬಾಣೆ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News