ಬುದ್ಧಿಜೀವಿಗಳಿಗೆ ಕಡಿವಾಣ ಹಾಕಬೇಕಿದೆ : ಅನಂತ್ ಕುಮಾರ್ ಹೆಗಡೆ

Update: 2018-06-17 13:31 GMT

ಬೆಂಗಳೂರು, ಜೂ.17: ಮೂರ್ಖತನವನ್ನೆ ಬಂಡವಾಳ ಮಾಡಿಕೊಂಡಿರುವ ಎಡಪಂಥೀಯ ಬುದ್ಧಿಜೀವಿಗಳು ತಮ್ಮ ಬುದ್ಧಿಯನ್ನು ಮಾರಾಟಕ್ಕಿಟ್ಟು, ಹಿಂದುತ್ವಕ್ಕೆ ಮಸಿ ಬಳಿಯಲು ಹೊರಟಿದ್ದಾರೆ. ಇವರಿಗೆ ಕಡಿವಾಣ ಹಾಕಬೇಕಿದೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ತಿಳಿಸಿದ್ದಾರೆ.

ರವಿವಾರ ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಮೃದ್ಧ ಸಾಹಿತ್ಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್‌ರವರ ‘ಹಿಂದುತ್ವ' ಕನ್ನಡ ಅನುವಾದಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬುದ್ಧಿಜೀವಿಗಳು ಬಣ್ಣ ಹಚ್ಚಿದಾಗ ಮಾತ್ರ ನೋಡಲು ಸರಿ. ಬಣ್ಣ ಕಳಚಿದರೆ ಅವರ ಮುಖ ನೋಡಲು ಸಾಧ್ಯವಾಗುವುದಿಲ್ಲ. ಇಂತಹ ಬುದ್ಧಿಜೀವಿಗಳು ವಿದೇಶಿ ಬಂಡವಾಳಕ್ಕೆ ತಮ್ಮನ್ನು ಮಾರಿಕೊಂಡು ಹಿಂದುತ್ವಕ್ಕೆ ಮಸಿ ಬಳಿಯಲು ಹೊರಟಿದ್ದಾರೆ ಎಂದರು.

ಹಿಂದೂಗಳು ಎಲ್ಲಿಂದಲೋ ವಲಸೆ ಬಂದವರಲ್ಲ. ಇದೇ ಮಣ್ಣಿನಲ್ಲಿ ಬೆಳೆದ ಸಂಸ್ಕೃತಿ ಹಿಂದೂ, ಹಿಂದುತ್ವ ಎನ್ನುವುದು ಜಗತ್ತಿನ ಅದ್ಭುತ ಜೀವನ ಶೈಲಿ. ಹೀಗಾಗಿ, ಬುದ್ಧಿಜೀವಿಗಳು ಬೊಬ್ಬೆ ಹೊಡೆಯುವ ಅಗತ್ಯವಿಲ್ಲ ಎಂದ ಅವರು, ಈ ಸಂಸ್ಕೃತಿ, ಇತಿಹಾಸ ಗೊತ್ತಿಲ್ಲದ ವಿಚಾರವಾದಿಗಳು ಅವರಿಗೆ ಬೇಕಾದ ಹಾಗೇ ಮಾತನಾಡುತ್ತಾರೆ ಎಂದು ಹೇಳಿದರು.

ಇಂದಿನ ಪಿಎಚ್‌ಡಿ ಕಾಪಿಪೇಸ್ಟ್:  ಕಾಪಿ ಪೇಸ್ಟ್ ಮಾಡುವುದು ಇಂದಿನ ಪಿಎಚ್‌ಡಿ. ಆದರೆ, ಸಾವರ್ಕರ್ ಇದನ್ನು ಮಾಡಿಲ್ಲ. ಇದನ್ನು ಜನರಿಗೆ ತಿಳಿಸುವ ಪ್ರಯತ್ನವಾಗಬೇಕು. ಬುದ್ಧಿಯನ್ನು ಹೊದ್ದು ಮಲಗಿರುವ ಜೀವಿಗಳು ಇದರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದ ಅವರು ಪ್ರಸ್ತುತ ವೈಚಾರಿಕ ಮಂಥನ ಕಾಲದಲ್ಲಿ ಇಂತಹ ಪುಸ್ತಕದ ಅಗತ್ಯವಿತ್ತು ಎಂದು ಹೇಳಿದರು.

ಅಮೆರಿಕಕ್ಕೆ ಹೋಗಿ ಅಲ್ಲಿ ನಾಲ್ಕು ಪದ ಕಲಿತುಕೊಂಡು ಬಂದು ಭಾರತದ ರಸ್ತೆ, ಚರಂಡಿ ಸರಿ ಇಲ್ಲ ಎನ್ನುತ್ತಾರೆ. ನಮ್ಮ ದೇಶದ ಹಾಗೂ ಹಿಂದೂಗಳ ಬಗ್ಗೆ ಮಾತನಾಡ್ತಾರೆ ಎಂದು ಹರಿಹಾಯ್ದರು.

ಹಿಂದೂ ಎಂದರೆ ಅವಮಾನ:  ಕ್ರಿಶ್ಚಿಯನ್ ಕ್ರಿಶ್ಚಿಯನ್ ಎಂದು ಹೇಳಬಹುದು, ಮುಸ್ಲಿಮರಿಗೆ ಮುಸ್ಲಿಮ್ ಎಂದು ಕರೆದರೆ ಖುಷಿ, ಆದರೆ, ನಾವು ಹಿಂದೂ ಎಂದು ಹೇಳಬಾರದ ಎಂದು ಪ್ರಶ್ನಿಸಿದ ಅವರು, ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರು ನಾವು ಜಾತ್ಯತೀತ ಎಂದು ಹೇಳಲು ಖುಷಿಪಡುತ್ತಾರೆ. ನಾವು ಹಿಂದೂಗಳು ಎಂದು ಹೇಳಿದರೆ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏನಾದರೂ ಬರೆದುಕೊಳ್ಳಿ: ಮಾಧ್ಯಮದವರೇನಾದ್ರು ಬಂದಿದ್ರೆ ನಾಳೆ ಅನಂತ ಕುಮಾರ್ ಹೆಗಡೆಗೆ ಉಚ್ಚಾರಣೆ ಬರಲ್ಲ ಅಂತ ಬರೆಯುತ್ತಾರೆ. ಅದನ್ನೆ ಹೈಲೆಟ್ ಮಾಡುತ್ತಾರೆ. ಅಲ್ಲದೇ, ಕ್ಯಾಪಸಿಟಿ ಅಂತ ಹೇಳಲು ಬಾರದ ಕೇಂದ್ರ ಸಚಿವ ಕ್ಯಾಪಟಿಟಿ ಎಂದು ಹೇಳಿದ ಎನ್ನುತ್ತಾರೆ. ಅವರವರ ಶೈಲಿಯಲ್ಲಿ ಬರೆಯುವುದು ಅವರವರ ಕೆಪಾಟಿಟಿ, ಹೀಗಾಗಿ ಏನಾದರೂ ಬರೆದುಕೊಳ್ಳಿ ಎಂದು ವ್ಯಂಗ್ಯವಾಡಿದರು.

ಮಾಧ್ಯಮಗಳು ತೆಗಳಲಿ: ನನ್ನ ಮಾತು ಇಲ್ಲಿ ಕುಳಿತವರಿಗೆ ತಲುಪುತ್ತದೆಯೋ ಇಲ್ಲವೋ ಆದ್ರೆ ಮಾಧ್ಯಮಗಳಲ್ಲಿ ಬರುತ್ತದೆ. ನನ್ನ ಬಗ್ಗೆ ಮಾಧ್ಯಮಗಳು ಹೊಗಳಿ ಬರೆದರೆ ನೀವು ಮಾಧ್ಯಮಗಳ ಜೊತೆ ಅಡ್ಜೆಸ್ಟ್ ಮಾಡಿಕೊಂಡ್ರ ಎಂದು ಜನ ಪ್ರಶ್ನಿಸುತ್ತಾರೆ. ಹೀಗಾಗಿ, ಮಾಧ್ಯಮಗಳು ನನ್ನನ್ನು ತೆಗಳುತ್ತಲೆ ಇರಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

ಕಾರ್ಯಕ್ರಮದಲ್ಲಿ ಅಂಕಣಕಾರ ರೋಹಿತ್ ಚಕ್ರತೀರ್ಥ, ಕವಿ ಎಂ.ಎನ್. ವ್ಯಾಸರಾವ್, ಲೇಖಕ ಜಿ.ಬಿ.ಹರೀಶ್ ಸೇರಿ ಪ್ರಮುಖರಿದ್ದರು.

ಬೆದರಿಕೆಗೆ ಬಗ್ಗುವುದಿಲ್ಲ  

ನಾನು ವಿಷಕಂಠ ಪರಂಪರೆಯವನು. ಮಾಧ್ಯಮದವರು ನನ್ನನ್ನು ನಿಂದಿಸಿ ವರದಿ ಮಾಡಬೇಕು. ಅದನ್ನು ಆರಾಧನೆ ಎಂದು ಕೊಳ್ಳುವೆ. ಇನ್ನು, ನಾನು ಹಿಂದೂ, ಯಾರ ಬೆದರಿಕೆಗೂ ಬಗ್ಗುವುದಿಲ್ಲ. ನಾನಾಡುವ ಮಾತು ನಿಲ್ಲಿಸಲು ರಣಹೇಡಿ ತಂದೆ, ತಾಯಿಗೆ ಹುಟ್ಟಿದ ಮಗ ನಾನಲ್ಲ.

-ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News