ಹೊಸ ಸರಕಾರ ಹೊಸ ಬಜೆಟ್ ಮಂಡಿಸುವುದು ಸ್ವಾಭಾವಿಕ: ಡಾ.ಜಿ.ಪರಮೇಶ್ವರ್

Update: 2018-06-17 13:51 GMT

ಬೆಂಗಳೂರು, ಜೂ.17: ಹೊಸ ಸರಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿಸುವುದು ವಾಡಿಕೆ. ಪ್ರತಿಯೊಂದು ಸರಕಾರಕ್ಕೆ ಹೊಸ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನು ಬಜೆಟ್ ಮೂಲಕ ಪ್ರಕಟಿಸುವುದು ಸ್ವಾಭಾವಿಕವಾದ ಸಂಪ್ರದಾಯ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿ 10 ದಿನಗಳ ಒಳಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಡಲಿದೆ. ಅನಂತರ ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸದ ಹೊರತು ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಮೊದಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಬೇಕು. ಅದಕ್ಕೆ ಹಣಕಾಸು ಸೌಲಭ್ಯ ಒದಗಿಸಬೇಕು. ಮೈತ್ರಿ ಸರಕಾರಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳೇ ಮೂಲ ಆಧಾರ. ಅದರ ಹೊರತಾಗಿ ಬೇರೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಹಿಂದಿನ ಸರಕಾರದ ಎಲ್ಲ ಯೋಜನೆಗಳು ಮೈತ್ರಿ ಸರಕಾರದಲ್ಲಿ ಮುಂದುವರೆಯಲಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಅಗತ್ಯವಿಲ್ಲ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಮೈತ್ರಿ ಸರಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು ಅಥವಾ ಪೂರಕ ಬಜೆಟ್‌ನಲ್ಲೇ ಹೊಸ ಸರಕಾರದ ಕಾರ್ಯಕ್ರರಮಗಳನ್ನು ಸೇರಿಸಬೇಕಾ ಎಂಬೆಲ್ಲಾ ಅಂಶಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುಗೊಂಡ ನಂತರವೇ ಚರ್ಚೆಯಾಗುತ್ತವೆ. ಅದಕ್ಕೆ ಮೊದಲು ಯಾವ ನಿರ್ಧಾರಗಳು ಆಗುವುದಿಲ್ಲ ಎಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರದ ವಿಷಯವಾಗಿ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ನಾನು, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮಾತ್ರ ಮೈತ್ರಿ ಸರಕಾರದ ವಿಷಯವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರೆಲ್ಲಾ ಮಾತನಾಡುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತದೆ.
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News