ಮಳೆಯಿಂದ ಹಾನಿಯಾದ ರಸ್ತೆ-ಸೇತುವೆ ದುರಸ್ತಿಗೆ ಆದ್ಯತೆ ನೀಡಲು ಸಚಿವ ಎಚ್.ಡಿ.ರೇವಣ್ಣ ಆದೇಶ

Update: 2018-06-17 13:53 GMT

ಧಾರವಾಡ, ಜೂ.17: ಮುಂಗಾರು ಮಳೆಯಿಂದ ಹಾನಿಯಾಗಿರುವ ಜಿಲ್ಲೆಯ ರಸ್ತೆ, ಸೇತುವೆ ಹಾಗೂ ಗ್ರಾಮೀಣ ರಸ್ತೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ತಕ್ಷಣ ದುರಸ್ತಿ ಕಾರ್ಯಕೈಗೊಳ್ಳಬೇಕು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಜಾಗೃತಿ ವಹಿಸಲು ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆದೇಶಿಸಿದ್ದಾರೆ.

ರವಿವಾರ ಧಾರವಾಡ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಲೋಕೋಪಯೊಗಿ ಇಲಾಖೆಯ ಧಾರವಾಡ ವೃತ್ತದಲ್ಲಿ ಬರುವ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮಳೆಯಿಂದಾಗಿ ರಸ್ತೆಗಳಲ್ಲಿ ಉಂಟಾಗಿರುವ ತಗ್ಗು, ಗುಂಡಿಗಳನ್ನು ಮುಚ್ಚಬೇಕು. ಮತ್ತು ರಸ್ತೆಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಲೋಕೋಪಯೊಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಒಂದು ಕೋಟಿ ರೂ. ಮೊತ್ತದ, ಅಧೀಕ್ಷಕ ಅಭಿಯಂತರರಿಗೆ ಎರಡು ಕೋಟಿ ರೂ. ಮೊತ್ತದ ಮತ್ತು ಮುಖ್ಯ ಅಭಿಯಂತರರಿಗೆ ಹತ್ತು ಕೋಟಿ ರೂ. ಮೊತ್ತದ ಮಿತಿಯ ಕಾಮಗಾರಿಗಳನ್ನು ಅನುಮೋದಿಸಿ ಅನುಷ್ಠಾನಗೊಳಿಸಲು ಅಧಿಕಾರ ನೀಡಲಾಗಿದೆ ಎಂದು ಅವರು ಸೂಚನೆ ನೀಡಿದರು.

ಅಧಿಕಾರಿಗಳು ದುರಸ್ತಿ ಅಥವಾ ಕಾಮಗಾರಿಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಗಮನಕ್ಕೆ ತಂದು ಅವರ ಅಭಿಪ್ರಾಯಗಳಿಗೂ ಪ್ರಾಶಸ್ತ್ಯ ನೀಡಬೇಕೆಂದು ಎಚ್.ಡಿ.ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಅಧೀಕ್ಷಕ ಅಭಿಯಂತರರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಹಾನಿಯನ್ನು ಗುರುತಿಸಬೇಕು. ಮತ್ತು ತಡಮಾಡದೆ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಕಾಮಗಾರಿಗಳನ್ನು ಆರಂಭಿಸಬೇಕು. ಇಲಾಖೆಯಿಂದ ಪೂರ್ವ ಮಂಜೂರಾತಿಗೆ ಕಾಯದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಂಡು ಘಟನೋತ್ತರ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಬೇಕು ಎಂದು ಅವರು ಹೇಳಿದರು. ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿನ ಅಧಿಕಾರಿಗಳ ಸಭೆ ಜರುಗಿಸಿ ಅಗತ್ಯವಿರುವ ಕಾಮಗಾರಿಗಳಿಗೆ ಮಂಜೂರಾತಿ ನೀಡಬೇಕು. ಈ ಸಭೆಗಳ ನಡಾವಳಿಗಳನ್ನು ಇಲಾಖೆಗೆ ಕಳುಹಿಸಬೇಕು. ಮುಂದಿನ ಮೂರು ದಿನಗಳಲ್ಲಿ ಈ ಕುರಿತ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳು ಇಲಾಖೆಗೆ ಸಲ್ಲಿಸಬೇಕೆಂದು ರೇವಣ್ಣ ಸೂಚಿಸಿದರು.

ತುರ್ತು ಕಾಮಗಾರಿಗಳಿಗೆ ಸರಿಯಾಗಿ ಸ್ಪಂದಿಸದ, ನೀಡಿದ ನಿರ್ದೇಶನದಂತೆ ಕೆಲಸ ಮಾಡದ ಇಲಾಖೆಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದಲ್ಲಿ ತಕ್ಷಣ ಅಂತಹ ಅಧಿಕಾರಿಗಳನ್ನು ಅಮಾನತ್ತು ಮಾಡುತ್ತೇನೆ ಎಂದು ರೇವಣ್ಣ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಹಾನಿಯಿಂದ ಸುಮಾರು 33 ಕೋಟಿ ರೂ.ಮೊತ್ತದ ಜನ ಜಾನುವಾರು ಸೇರಿದಂತೆ ಸಾರ್ವಜನಿಕ ಆಸ್ತಿ ಹಾನಿಯಾಗಿದೆ ಎಂದು ತಿಳಿಸಿದರು. ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಬಿ.ಸಿ.ಪಾಟೀಲ್, ಸಿ.ಎಂ.ಉದಾಸಿ, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೆನಕೊಪ್ಪ, ರಾಮಣ್ಣ ಲಮಾಣಿ, ಅಮೃತ ದೇಸಾಯಿ, ಪ್ರಸಾದ್ ಅಬ್ಬಯ್ಯ, ಸಿ.ಎಸ್.ಶಿವಳ್ಳಿ, ವಿರೂಪಾಕ್ಷಪ್ಪಬಳ್ಳಾರಿ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಆಗಿರುವ ಮಳೆಹಾನಿ ಹಾಗೂ ಸಾರ್ವಜನಿಕರ ತೊಂದರೆಗಳ ಕುರಿತು ಮಾತನಾಡಿದರು.

ಸಭೆಯಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಲೋಕೋಪಯೊಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News