ಕಡ್ಡಾಯವಾಗಿ ಕನ್ನಡ ಅಳವಡಿಸಿಕೊಳ್ಳಲು ಕೇಂದ್ರ-ರಾಜ್ಯ ಸರಕಾರಿ ಕಚೇರಿಗಳಿಗೆ ಪ್ರಾಧಿಕಾರದ ಸೂಚನೆ

Update: 2018-06-17 13:56 GMT

ಬೆಂಗಳೂರು, ಜೂ.17: ರಾಜ್ಯದ ಬ್ಯಾಂಕುಗಳು, ಸಾರ್ವಜನಿಕ ವಲಯ ಉದ್ದಿಮೆಗಳು, ಕೇಂದ್ರ ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಿಸಿದ್ದು, ಕನ್ನಡ ಭಾಷೆ ತಿಳಿಯದ ಅಧಿಕಾರಿಗಳಿಗೆ ತರಬೇತಿ ನೀಡುವಂತೆ ಆಡಳಿತಾತ್ಮಕ ತರಬೇತಿ ಸಂಸ್ಥೆ(ಎಟಿಎ)ಗೆ ಸೂಚನೆ ನೀಡಿದೆ.

ಮೈಸೂರಿನಲ್ಲಿರುವ ಆಡಳಿತಾತ್ಮಕ ತರಬೇತಿ ಸಂಸ್ಥೆ ರಾಜ್ಯ ಸರಕಾರದ ಅಧೀನದಲ್ಲಿರುವ ತರಬೇತಿ ನೀಡುವ ಸಂಸ್ಥೆಯಾಗಿದ್ದು, ರಾಜ್ಯ ನಾಗರಿಕ ಸೇವೆಗಳು ಮತ್ತು ಸಂಶೋಧಕ ಕೋರ್ಸ್‌ಗಳ ಹಿರಿಯ ಅಧಿಕಾರಿಗಳಿಗೆ ಮೂಲ ಕೋರ್ಸ್‌ಗಳನ್ನು ನಡೆಸುತ್ತದೆ. ಹಣಕಾಸು ನಿರ್ವಹಣೆಯಿಂದ ಹಿಡಿದು ಕಾನೂನು ಸೇವೆಗಳವರೆಗೆ ಹಲವು ಕೋರ್ಸ್‌ಗಳನ್ನು ನಿಗದಿತ ಆಧಾರದ ಮೇಲೆ ನಡೆಸಲಾಗುತ್ತದೆ. ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಸೇರ್ಪಡೆಯಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಇಲ್ಲಿ ಆರಂಭದಲ್ಲಿ 4 ತಿಂಗಳ ಕನ್ನಡ ಕ್ರಾಶ್ ಕೋರ್ಸ್‌ನಲ್ಲಿ ಭಾಗವಹಿಸುತ್ತಾರೆ.

ಪ್ರಸ್ತುತ ಎಲ್ಲಾ ತರಬೇತಿಗಳನ್ನು ಇಂಗ್ಲಿಷ್‌ನಲ್ಲಿ ನೀಡಲಾಗುತ್ತದೆ. ನಾವು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಐಎಎಸ್, ಐಪಿಎಸ್ ಹಂತದ ಅಧಿಕಾರಿಗಳಿಗೆ ಇಂಗ್ಲಿಷ್‌ನಲ್ಲಿ ತರಬೇತಿ ನೀಡಿದರೆ ಒಪ್ಪಿಕೊಳ್ಳೋಣ. ಆದರೆ, ನಮ್ಮ ರಾಜ್ಯದ ನೌಕರರಿಗೂ ಇಂಗ್ಲಿಷ್‌ನಲ್ಲಿ ತರಬೇತಿ ನೀಡುತ್ತಾರೆ.

ಕೆಲ ದಿನಗಳ ಹಿಂದೆ ಐಟಿಐ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಸ್ಥೆಯಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆ ಪ್ರಯೋಗವನ್ನು ಬಳಕೆ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಹಲವು ಮೊದಲ ದರ್ಜೆಯ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಸೇರಿದಂತೆ ಪರಿಕರಣಗಳನ್ನು ಇಂಗ್ಲಿಷ್‌ನಲ್ಲಿ ನೀಡುತ್ತಾರೆ. ಇಲ್ಲಿ ತರಬೇತಿಯಾದ ಅಧಿಕಾರಿಗಳು ತಾಲ್ಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ರಾಜ್ಯದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ಕಡ್ಡಾಯವಾಗಿ ಕನ್ನಡವನ್ನು ಹೇಳಿಕೊಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News