ರೈಲುಗಳಲ್ಲಿ ಹೈಟೆಕ್ ಶೌಚಾಲಯ ವ್ಯವಸ್ಥೆ: ಪಿಯೂಷ್ ಗೋಯಲ್

Update: 2018-06-17 13:56 GMT

ಹೊಸದಿಲ್ಲಿ, ಜೂ.17: ಬಹುತೇಕ ರೈಲ್ವೆ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಿಡಿಸಿದ ಬಳಿಕ ಇದೀಗ ವಿಮಾನಗಳಲ್ಲಿ ಇರುವಂತೆ ‘ಹೈಟೆಕ್’ ಶೌಚಾಲಯಗಳನ್ನು ರೈಲ್ವೆಗಳಲ್ಲಿ ಅಳವಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ರೈಲುಗಳ ಶೌಚಾಲಯಗಳನ್ನು ನಿರ್ವಾತ ಜೈವಿಕ ಶೌಚಾಲಯ(ವ್ಯಾಕ್ಯೂಂ ಬಯೊ ಟಾಯ್ಲೆಟ್)ಗಳನ್ನಾಗಿ ಮಾರ್ಪಡಿಸುವ ಮೂಲಕ ವಿಮಾನಪ್ರಯಾಣಕ್ಕೆ ಸವಾಲೊಡ್ಡಲು ರೈಲ್ವೇ ಇಲಾಖೆ ಮುಂದಾಗಿದೆ. 

ವಿಮಾನಗಳಲ್ಲಿ ಇರುವಂತಹ ನಿರ್ವಾತ ಜೈವಿಕ ಶೌಚಾಲಯಗಳನ್ನು ರೈಲುಗಳಲ್ಲಿ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಸುಮಾರು 500ರಷ್ಟು ನಿರ್ವಾತ ಜೈವಿಕ ಶೌಚಾಲಯಳ ಪೂರೈಕೆಗೆ ಕೋರಿಕೆ ಸಲ್ಲಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೆ ರೈಲುಗಳ 2.5 ಲಕ್ಷ ಶೌಚಾಲಯಗಳ ಬದಲು ನಿರ್ವಾತ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗುವುದು ಎಂದವರು ತಿಳಿಸಿದ್ದಾರೆ.

 ಮಾರ್ಚ್ 31ರವರೆಗೆ 37,411ಬೋಗಿಗಳಲ್ಲಿ 1,36,965 ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದ್ದು ಪ್ರತೀ ಶೌಚಾಲಯಕ್ಕೆ ಸುಮಾರು 1ಲಕ್ಷ ರೂ. ವೆಚ್ಚವಾಗಿದೆ. 2019ರ ಮಾರ್ಚ್ ಒಳಗೆ ಇನ್ನೂ ಸುಮಾರು 18,750 ಬೋಗಿಗಳಲ್ಲಿ ಜೈವಿಕ ಶೌಚಾಲಯ ಅಳವಡಿಸಲಾಗುತ್ತದೆ. ಎಲ್ಲಾ ಶೌಚಾಲಯಗಳನ್ನೂ ಜೈವಿಕ ಶೌಚಾಲಯಗಳಾಗಿ ಪರಿವರ್ತಿಸಲು ರೈಲ್ವೇ ಇಲಾಖೆಗೆ ಸುಮಾರು 250 ಕೋಟಿ ರೂ. ವೆಚ್ಚದ ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದ್ದಾರೆ. ಶೇ.100ರ ಸಾಧನೆ ಮಾಡಿದಾಗ ರೈಲ್ವೇ ಹಳಿಗಳು ದುರ್ವಾಸನೆ ಮುಕ್ತವಾಗಿ ಸ್ವಚ್ಛವಾಗಿ ಇರಲಿವೆ. ಅಲ್ಲದೆ ರೈಲುಗಳ ನವೀಕರಣದ ವೆಚ್ಚವೂ ಕಡಿಮೆಯಾಗುತ್ತದೆ.

ನಿರ್ವಾತ ಜೈವಿಕ ಶೌಚಾಲಯಗಳಿಗೆ ಪ್ರತೀ ಘಟಕಕ್ಕೆ 2.5 ಲಕ್ಷ ರೂ. ವೆಚ್ಚವಾಗಲಿದ್ದು ಇದರಲ್ಲಿ ನೀರಿನ ಬಳಕೆಯ ಪ್ರಮಾಣ ಸುಮಾರು 20ಪಟ್ಟು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಾದೇಶಿಕ ಸಂಪರ್ಕ ಯೋಜನೆ ‘ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್)’ ಅನ್ನು ಶ್ಲಾಘಿಸಿದ ಸಚಿವ ಗೋಯಲ್, ಸ್ಪರ್ಧೆಯು ರೈಲ್ವೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಪ್ರಧಾನಿಯವರು ಹೇಳುವಂತೆ ಈಗ ಹವಾಯ್ ಚಪ್ಪಲ್ ಧರಿಸುವ ಜನಸಾಮಾನ್ಯರೂ ವಿಮಾನ ಪ್ರಯಾಣ ಕೈಗೊಳ್ಳಲು ಸಾಧ್ಯವಾಗಿದೆ. ಅತೀ ಬಡವರನ್ನೂ ಸಶಕ್ತಗೊಳಿಸಿರುವುದು ನಮ್ಮ ಸರಕಾರಕ್ಕೆ ಹೆಮ್ಮೆಯ ವಿಷಯವಾಗಿದೆ. ರೈಲ್ವೆಗೂ ಇದರಿಂದ ಬಹಳ ಒಳಿತಾಗುವ ವಿಶ್ವಾಸವಿದೆ. ಸ್ಪರ್ಧೆಯು ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಗರಿಷ್ಟ ತೃಪ್ತಿ ನೀಡುವ ಸೇವೆ ಸಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News